ಹಸೀನಾ ಬೆಂಬಲಿಗರ ಮೇಲೆ ಸಶಸ್ತ್ರ ವಿದ್ಯಾರ್ಥಿಗಳ ದಾಳಿ

Update: 2024-08-15 15:40 GMT

   ಸಾಂದರ್ಭಿಕ ಚಿತ್ರ | PTI 

ಢಾಕಾ : ಬಾಂಗ್ಲಾದೇಶದ ಸ್ಥಾಪಕ ಶೇಕ್‌ ಮುಜಿಬುರ್ ರೆಹಮಾನ್ ಅವರ ಹತ್ಯೆಯ ದಿನವಾದ ಆಗಸ್ಟ್ 15ರಂದು ರಾಜಧಾನಿ ಢಾಕಾದಲ್ಲಿ ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ ಅವರ ಬೆಂಬಲಿಗರ ಮೇಲೆ ಸಶಸ್ತ್ರ ವಿದ್ಯಾರ್ಥಿಗಳ ಗುಂಪೊಂದು ದಾಳಿ ನಡೆಸಿ ಹಲವರನ್ನು ವಶದಲ್ಲಿರಿಸಿಕೊಂಡಿದೆ ಎಂದು ವರದಿಯಾಗಿದೆ.

1975ರ ಆಗಸ್ಟ್ 15ರಂದು ಹತ್ಯೆಯಾದ ಶೇಕ್‌ ಮುಜೀಬುರ್ ರಹಮಾನ್ ಅವರ ಸ್ಮರಣಾರ್ಥ ಆಗಸ್ಟ್ 15ನ್ನು ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ಶೋಕಾಚರಣೆ ಮತ್ತು ರಜಾದಿನವನ್ನು ರದ್ದುಗೊಳಿಸಿರುವುದಾಗಿ ಮಧ್ಯಂತರ ಸರಕಾರ ಘೋಷಿಸಿತ್ತು. ಈ ಮಧ್ಯೆ, ಆಗಸ್ಟ್ 15ನ್ನು ರಾಷ್ಟ್ರೀಯ ಶೋಕಾಚರಣೆ ದಿನವಾಗಿ ಆಚರಿಸುವಂತೆ ಪದಚ್ಯುತ ಪ್ರಧಾನಿ ಶೇಕ್‌ ಹಸೀನಾ ದೇಶದ ಜನರನ್ನು ಆಗ್ರಹಿಸಿದ್ದರು.

ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು ಪುಷ್ಪಾಂಜಲಿ ಸಲ್ಲಿಸಲು ಧನ್ಮಂಡಿಯಲ್ಲಿರುವ ಶೇಕ್‌ ಮುಜೀಬುರ್ ರಹಮಾನ್ ಅವರ ನಿವಾಸಕ್ಕೆ ತೆರಳಿದಾಗ, ನಿವಾಸದ ಹೊರಗೆ ದೊಣ್ಣೆ ಹಿಡಿದು ಕಾವಲು ನಿಂತಿದ್ದ ನೂರಾರು ವಿದ್ಯಾರ್ಥಿಗಳು ಹಸೀನಾ ಬೆಂಬಲಿಗರ ಮೇಲೆ ಹಲ್ಲೆ ನಡೆಸಿ ವಶದಲ್ಲಿ ಇರಿಸಿಕೊಂಡಿದ್ದರು. ಬಳಿಕ ಅಲ್ಲಿಗೆ ಆಗಮಿಸಿದ ಸೇನೆಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

ಶ್ರದ್ಧಾಂಜಲಿ ಸಭೆ ನಡೆಸುವ ನೆಪದಲ್ಲಿ ಮತ್ತೊಮ್ಮೆ ಗುಂಪು ಸೇರಿ ದೊಂಬಿ ನಡೆಸುವುದು ಅವಾಮಿ ಲೀಗ್ ಪಕ್ಷದ ಹುನ್ನಾರವಾಗಿತ್ತು. ದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಅವರ ಪ್ರಯತ್ನವನ್ನು ನಾವು ವಿಫಲಗೊಳಿಸಿದ್ದೇವೆ. ಇಂತಹ ಪ್ರಯತ್ನಗಳನ್ನು ತಡೆಯಲು ನಾವು ಪ್ರಮುಖ ರಸ್ತೆಗಳಲ್ಲಿ ಕಾವಲು ಮುಂದುವರಿಸಲಿದ್ದೇವೆ ಎಂದು ವಿದ್ಯಾರ್ಥಿಗಳ ಗುಂಪಿನ ಮುಖಂಡರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News