ಗಲ್ವಾನ್ ಕಣಿವೆ ಸೇರಿದಂತೆ ಪೂರ್ವ ಲಡಾಖ್‌ನ ನಾಲ್ಕು ಸ್ಥಳಗಳಿಂದ ಸೇನೆ ಹಿಂದೆಗೆತ : ಚೀನಾ

Update: 2024-09-14 17:05 GMT

PC : PTI

ಬೀಜಿಂಗ್ : ಗಲ್ವಾನ್ ಕಣಿವೆ ಸೇರಿದಂತೆ ಪೂರ್ವ ಲಡಾಖ್‌ನ ನಾಲ್ಕು ಸ್ಥಳಗಳಿಂದ ಸೇನೆಯನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಚೀನಾ ಶುಕ್ರವಾರ ಹೇಳಿದೆ. ಚೀನಾದೊಂದಿಗಿನ ನಿಸ್ಸೇನಿಕರಣ ಸಮಸ್ಯೆಗಳನ್ನು ಶೇ.75ರಷ್ಟು ಬಗೆಹರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಗುರುವಾರ ಜಿನೀವಾದಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

ಭಾರತ ಮತ್ತು ಚೀನಾ ರಷ್ಯದಲ್ಲಿ ತಮ್ಮ ಮಾತುಕತೆಗಳ ಸಂದರ್ಭ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಗಾಗಿ ಪೂರಕ ಸ್ಥಿತಿಗಳನ್ನು ಸೃಷ್ಟಿಸಲು ಜೊತೆಯಾಗಿ ಶ್ರಮಿಸಲು ಒಪ್ಪಿಕೊಂಡಿವೆ ಎಂದು ಚೀನಾ ವಿದೇಶಾಂಗ ಸಚಿವಾಲಯವು ಶುಕ್ರವಾರ ಹೇಳಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಗುರುವಾರ ರಷ್ಯದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಭದ್ರತಾ ವಿಷಯಗಳ ಹೊಣೆಯನ್ನು ಹೊಂದಿರುವ ಬ್ರಿಕ್ಸನ್ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ನೇಪಥ್ಯದಲ್ಲಿ ಮಾತುಕತೆಗಳನ್ನು ನಡೆಸಿದ್ದರು. ಗಡಿ ಸಮಸ್ಯೆಗಳ ಕುರಿತು ಇತ್ತೀಚಿನ ಸಮಾಲೋಚನೆಗಳಲ್ಲಿ ಆಗಿರುವ ಪ್ರಗತಿಯ ಕುರಿತು ಉಭಯ ನಾಯಕರು ಚರ್ಚಿಸಿದ್ದರು ಎಂದು ಚೀನದ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ದೋವಲ್ ಮತ್ತು ವಾಂಗ್ ಭಾರತ-ಚೀನಾ ಗಡಿ ಮಾತುಕತೆಗಳ ಕಾರ್ಯವಿಧಾನಕ್ಕೆ ಪ್ರತಿನಿಧಿಗಳಾಗಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ, ಪೂರ್ವ ಲಡಾಖ್‌ನಲ್ಲಿ ಮಿಲಿಟರಿ ಬಿಕ್ಕಟ್ಟಿನಿಂದಾಗಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸಾಗುತ್ತಿವೆಯೇ ಎಂಬ ಪ್ರಶ್ನೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೊ ನಿಂಗ್ ಅವರು, ಉಭಯ ಮಿಲಿಟರಿಗಳು ಗಲ್ವಾನ್ ಕಣಿವೆ ಸೇರಿದಂತೆ ನಾಲ್ಕು ಪ್ರದೇಶಗಳಿಂದ ತಮ್ಮ ಪಡೆಗಳನ್ನು ಹಿಂದೆಗೆದುಕೊಂಡಿವೆ ಹಾಗೂ ಗಡಿಯಲ್ಲಿ ಪರಿಸ್ಥಿತಿಯು ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಉತ್ತರಿಸಿದರು.

ದೋವಲ್-ವಾಂಗ್ ಮಾತುಕತೆಗಳ ಕುರಿತು ಇನ್ನಷ್ಟು ವಿವರಗಳನ್ನು ಒದಗಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ಹೇಳಿಕೆಯು, ಚೀನಾ-ಭಾರತ ನಡುವಿನ ಸಂಬಂಧಗಳಲ್ಲಿ ಸ್ಥಿರತೆಯು ಉಭಯ ದೇಶಗಳ ಜನರ ಮೂಲಭೂತ ಮತ್ತು ದೀರ್ಘಾವಧಿಯ ಹಿತಾಕ್ತಿಗಳಿಂದ ಕೂಡಿದೆ ಹಾಗೂ ಪ್ರಾದೇಶಿಕ ಶಾಂತಿ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ ಎಂಬ ನಂಬಿಕೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು. ಉಭಯ ದೇಶಗಳ ಮುಖ್ಯಸ್ಥರ ನಡುವೆ ಮೂಡಿರುವ ಸಹಮತವನ್ನು ಅನುಷ್ಠಾನಿಸಲು,ಪರಸ್ಪರ ತಿಳುವಳಿಕೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು,ನಿರಂತರ ಸಂವಹನವನ್ನು ಕಾಯ್ದುಕೊಳ್ಳಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಪೂರಕ ಸ್ಥಿತಿಗಳನ್ನು ಸೃಷ್ಟಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News