ಅಧ್ಯಕ್ಷೀಯ ಅಭ್ಯರ್ಥಿಯ ಹತ್ಯೆ: ಈಕ್ವೆಡಾರ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Update: 2023-08-11 15:22 GMT

ಫೆರ್ನಾಂಡೊ ವಿಲಾವಿಸೆನ್ಸಿ : Photo | NDTV

ಖ್ವಿಟೊ: ಜನಪ್ರಿಯ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೊ ವಿಲಾವಿಸೆನ್ಸಿಯೊರನ್ನು ಚುನಾವಣಾ ರ್ಯಾಲಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಈಕ್ವೆಡಾರ್ನಲ್ಲಿ 2 ತಿಂಗಳಾವಧಿಗೆ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಅಲ್ಲದೆ ಮೂರು ದಿನ ರಾಷ್ಟ್ರೀಯ ಶೋಕಾಚರಣೆಯನ್ನೂ ಘೋಷಿಸಲಾಗಿದೆ. ಗುಂಡಿನ ದಾಳಿಯಲ್ಲಿ ಮೂವರು ಪೊಲೀಸರ ಸಹಿತ 9 ಮಂದಿಗೆ ಗಾಯವಾಗಿದೆ.

ಬುಧವಾರ ರಾತ್ರಿ ರಾಜಧಾನಿ ಖ್ವಿಟೊದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ 59 ವರ್ಷದ ವಿಲಾವಿಸೆನ್ಸಿಯೊರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪತ್ರಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರಾಗಿದ್ದ ವಿಲಾವಿಸೆನ್ಸಿಯೊ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 6 ಕೊಲಂಬಿಯನ್ನರನ್ನು ಬಂಧಿಸಲಾಗಿದ್ದು ಮತ್ತೊಬ್ಬ ಶಂಕಿತ ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ಸಂಘಟಿತ ಅಪರಾಧ ತಂಡದವರು ಎಂದು ಆಂತರಿಕ ಸಚಿವ ಜುವಾನ್ ಝಪಾಟ ಹೇಳಿದ್ದಾರೆ. ತಮ್ಮ ನೆಚ್ಚಿನ ಮುಖಂಡನ ಹತ್ಯೆಯಿಂದ ರೊಚ್ಚಿಗೆದ್ದ ಅಭಿಮಾನಿಗಳು ಹಿಂಸಾಚಾರದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ದೇಶದಲ್ಲಿ 2 ತಿಂಗಳು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹತ್ಯೆ ಪ್ರಕರಣದ ತನಿಖೆಯಲ್ಲಿ ಅಮೆರಿಕದ FBI ನೆರವು ಕೋರಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ತನಗೆ ಮಾದಕವಸ್ತು ಸಾಗಣೆ ಜಾಲದಿಂದ ಜೀವ ಬೆದರಿಕೆ ಇದೆ ಎಂದು ವಿಲಾವಿಸೆನ್ಸಿಯೊ ದೂರು ನೀಡಿದ್ದರು. ಬುಲೆಟ್ ಪ್ರೂಫ್ ಜಾಕೆಟ್ ಧರಿಸುವಂತೆ ಅವರಿಗೆ ಭದ್ರತಾ ಪಡೆ ಸಲಹೆ ನೀಡಿದ್ದು ಅವರು ನಿರಾಕರಿಸಿದ್ದರು. ದೇಶದಲ್ಲಿ ಮಧ್ಯಂತರ ಚುನಾವಣೆಗೆ 10 ದಿನ ಇರುವಂತೆಯೇ ಈ ಘಟನೆ ನಡೆದಿದೆ. ಇದೊಂದು ರಾಜಕೀಯ ಅಪರಾಧವಾಗಿದ್ದು ಚುನಾವಣಾ ಪ್ರಕ್ರಿಯೆಗೆ ಭಂಗ ತರುವ ಪ್ರಯತ್ನವಾಗಿದೆ ಎಂದು ಅಧ್ಯಕ್ಷ ಗಿಲೆರ್ಮೋ ಲಾಸ್ಸೊ ಪ್ರತಿಕ್ರಿಯಿಸಿದ್ದಾರೆ. ಅಧ್ಯಕ್ಷೀಯ ಅಭ್ಯರ್ಥಿಯ ಹತ್ಯೆ ಪ್ರಕರಣವನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಾಗೂ ಯುರೋಪಿಯನ್ ಯೂನಿಯನ್ ವಿದೇಶ ಕಾರ್ಯನೀತಿ ಮುಖ್ಯಸ್ಥ ಜೋಸೆಫ್ ಬೊರೆಲ್ ಖಂಡಿಸಿದ್ದು ಈಕ್ವೆಡಾರ್ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಇಂತಹ ದಾಳಿಗಳು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯನ್ನು ಪ್ರತಿನಿಧಿಸುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ. `ಹಿಂಸಾಚಾರದ ನಡುವೆ ದೇಶ ಮತ್ತು ಅಲ್ಲಿನ ಜನತೆಗೆ ಎದುರಾಗಿರುವ ಸವಾಲನ್ನು ಇದು ಎತ್ತಿತೋರಿಸಿದೆ ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಮುಖ್ಯಸ್ಥ ವೋಕರ್ ಟರ್ಕ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News