ಪಾಕಿಸ್ತಾನ: ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟ; 25 ಮಂದಿ ಸಾವು
ಇಸ್ಲಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದ ಪ್ರಾಂತದ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಟ 25 ಮಂದಿ ಸಾವನ್ನಪ್ಪಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆ ನೈಋತ್ಯ ಪಾಕಿಸ್ತಾನದ ಕ್ವೆಟಾ ರೈಲ್ವೇ ಸ್ಟೇಷನ್‍ಗೆ ಪ್ರಯಾಣಿಕರ ರೈಲು ಆಗಮಿಸುವುದಕ್ಕೆ ಕೆಲ ಕ್ಷಣಗಳ ಮೊದಲು ರೈಲ್ವೇ ನಿಲ್ದಾಣದ ಟಿಕೆಟ್ ಬುಕಿಂಗ್ ಆಫೀಸ್‍ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಬಾಂಬ್ ಸ್ಫೋಟದ ಹೊಣೆ ವಹಿಸಿಕೊಂಡಿದೆ. ಇದು ಆತ್ಮಹತ್ಯಾ ಬಾಂಬ್ ದಾಳಿ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟ ನಡೆದಾಗ ರೈಲ್ವೇ ನಿಲ್ದಾಣ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.
ಸುಮಾರು 8 ಕಿ.ಗ್ರಾಂ.ನಷ್ಟು ಸ್ಫೋಟಕಗಳನ್ನು ಹೊಂದಿದ್ದ ಆತ್ಮಹತ್ಯಾ ಬಾಂಬರ್ ಬಾಂಬ್‍ದಾಳಿ ನಡೆಸಿರುವುದಾಗಿ ಶಂಕಿಸಲಾಗಿದೆ. ಆತ್ಮಹತ್ಯಾ ಬಾಂಬರ್ ಕೂಡಾ ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ. ಮೃತರು ಮತ್ತು ಗಾಯಾಳುಗಳಲ್ಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿ ಸೇರಿದ್ದಾರೆ. ಪಾಕಿಸ್ತಾನದ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿದೆ. ನಿಲ್ದಾಣದಿಂದ ಎಲ್ಲಾ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕ್ವೆಟಾದ ಜಿಲ್ಲಾಧಿಕಾರಿ ಹೇಳಿದ್ದಾರೆ. ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಳ್ಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.