ಇಸ್ರೇಲ್ ಗೆ ನುಸುಳಲು ಪ್ರಯತ್ನ: ಕೇರಳದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಜೋರ್ಡಾನ್ ಸೇನೆ

Update: 2025-03-03 07:45 IST
ಇಸ್ರೇಲ್ ಗೆ ನುಸುಳಲು ಪ್ರಯತ್ನ: ಕೇರಳದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಜೋರ್ಡಾನ್ ಸೇನೆ

ಥಾಮಸ್ ಗ್ಯಾಬ್ರಿಯಲ್ ಪೆರೇರಾ PC: x.com/TheWeekLive

  • whatsapp icon

ತಿರುವನಂತಪುರಂ: ಜೋರ್ಡಾನ್ ನಿಂದ ಅಕ್ರಮವಾಗಿ ಇಸ್ರೇಲ್ ಭೂಪ್ರದೇಶಕ್ಕೆ ನುಸುಳಲು ಯತ್ನಿಸಿದ ರಿಕ್ಷಾ ಚಾಲಕ ಕೇರಳ ಮೂಲದ ಥಾಮಸ್ ಗ್ಯಾಬ್ರಿಯಲ್ ಪೆರೇರಾ (47) ಎಂಬ ವ್ಯಕ್ತಿಯನ್ನು ಅಲ್ಲಿನ ಗಡಿರಕ್ಷಕರು ಗುಂಡಿಟ್ಟು ಹತ್ಯೆಗೈದಿರುವ ಬಗ್ಗೆ ವರದಿಯಾಗಿದೆ. ಇಸ್ರೇಲಿನಲ್ಲಿ ಉದ್ಯೋಗ ವೀಸಾ ದೊರಕಿಸಿಕೊಡುವುದಾಗಿ ನಂಬಿಸಿ ಟ್ರಾವೆಲ್ ಏಜೆನ್ಸಿಯೊಂದು ನಾಲ್ಕು ಮಂದಿಯನ್ನು ಜೋರ್ಡಾನ್ ಗೆ ಮೂರು ತಿಂಗಳ ಪ್ರವಾಸಿ ವೀಸಾದಲ್ಲಿ ಕರೆದುಕೊಂಡು ಹೋಗಿತ್ತು. ಈ ನಾಲ್ಕು ಮಂದಿಯಲ್ಲಿ ಪೆರೇರಾ ಕೂಡಾ ಸೇರಿದ್ದರು.

ಇದೇ ತಂಡದಲ್ಲಿದ್ದ ಪೆರೇರಾ ಸಂಬಂಧಿ ಎಡಿಸನ್ (43) ಎಂಬಾತನನ್ನು ಜೋರ್ಡಾನ್ ಇತ್ತೀಚೆಗೆ ಗಡೀಪಾರು ಮಾಡಿದ್ದು, ಪೆರೇರಾ ಅವರನ್ನು ಅಲ್ಲಿನ ಸೇನೆ ಗುಂಡಿಟ್ಟು ಸಾಯಿಸಿದ್ದನ್ನು ಎಡಿಸನ್ ಬಹಿರಂಗಪಡಿಸಿದ್ದಾರೆ. ಎಡಿಸನ್ ಕಾಲಿಗೂ ಗುಂಡು ತಗುಲಿದ್ದು, ಚಿಕಿತ್ಸೆ ನೀಡಿದ ಬಳಿಕ ಅವರನ್ನು ಗಡೀಪಾರು ಮಾಡಲಾಗಿತ್ತು. ಇತರ ಇಬ್ಬರು ಜೋರ್ಡಾನ್ ನ ಜೈಲಿನಲ್ಲಿದ್ದಾರೆ.

ಪೆರೇರಾ ಸಾವಿನ ಮಾಹಿತಿಯನ್ನು ಭಾರತೀಯ ರಾಜಭಾರ ಕಚೇರಿ ಇ-ಮೇಲ್ ಮೂಲಕ ಮೃತರ ಕುಟುಂಬಕ್ಕೆ ನೀಡಿದೆ ಎನ್ನಲಾಗಿದ್ದು, ಸುಧೀರ್ಘ ಅವಧಿಯಿಂದ ಇ-ಮೇಲ್ ಪರಿಶೀಲಿಸದ ಕಾರಣ ಕುಟುಂಬಕ್ಕೆ ಈ ಮುನ್ನ ವಿಷಯ ಗೊತ್ತಾಗಿರಲಿಲ್ಲ. ಮೃತ ವ್ಯಕ್ತಿಯ ಶವವನ್ನು ಪಡೆಯುವಲ್ಲಿ ಇದೀಗ ಸಂತ್ರಸ್ತ ಕುಟುಂಬ ನಾಕಾ ರೂಟ್ಸ್ ಎಂಬ ಸರ್ಕಾರಿ ಸಂಸ್ಥೆಯ ಮೊರೆ ಹೋಗಿದೆ.

ಪೆರೇರಾ ಹಾಗೂ ಎಡಿಸನ್ ಇಬ್ಬರೂ ಆಟೊರಿಕ್ಷಾ ಚಾಲಕರಾಗಿದ್ದು, ಜೋರ್ಡಾನ್ ಗೆ ತೆರಳುವವರೆಗೂ ತಮ್ಮ ಪ್ರಯಾಣದ ಉದ್ದೇಶವನ್ನು ಬಹಿರಂಗಪಡಿಸಿರಲಿಲ್ಲ. ಫೆಬ್ರುವರಿ 5ರಂದು ಹೊರಡುವ ಕೆಲವೇ ಗಂಟೆಗಳ ಮುನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಫೆಬ್ರುವರಿ 9ರವರೆಗೂ ಇಬ್ಬರೂ ಕುಟುಂಬದ ಸಂಪರ್ಕದಲ್ಲಿದ್ದರು. ಬಳಿಕ ಫೆಬ್ರುವರಿ 10ರಂದು ಪರ್ವತ ಹಾಗೂ ಕಣಿವೆಯ ಮಾರ್ಗದ ಮೂಲಕ ಇಸ್ರೇಲ್ ಗೆ ಅಕ್ರಮವಾಗಿ ನುಸುಳುವ ಪ್ರಯತ್ನ ಮಾಡಿದ್ದರು. ಜೋರ್ಡಾನ್ ಸೈನಿಕರು ಇದನ್ನು ಪತ್ತೆ ಮಾಡಿ ಗುಂಡು ಹಾರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News