ಮಳೆ, ಪ್ರವಾಹಕ್ಕೆ ತತ್ತರಿಸಿದ ಬಾಂಗ್ಲಾದೇಶ : ಇಬ್ಬರು ಮೃತ್ಯು
ಢಾಕಾ: ನಿರಂತರ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹಕ್ಕೆ ಬಾಂಗ್ಲಾದೇಶ ತತ್ತರಿಸಿದ್ದು ದಕ್ಷಿಣ ಮತ್ತು ಪೂರ್ವದ ಕನಿಷ್ಠ 8 ಜಿಲ್ಲೆಗಳು ಜಲಾವೃತಗೊಂಡಿವೆ. ಪ್ರವಾಹದ ನಡುವೆ ಸಿಲುಕಿರುವ ಸಾವಿರಾರು ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ.
ಸುಮಾರು 2.9 ದಶಲಕ್ಷ ಜನರು ಬಾಧಿತರಾಗಿದ್ದಾರೆ. 70,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಇಬ್ಬರು ಸಾವನ್ನಪ್ಪಿರುವ ಮಾಹಿತಿ ಲಭಿಸಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಹಿರಿಯ ಅಧಿಕಾರಿ ಮುಹಮ್ಮದ್ ನಜ್ಮುಲ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗೆ ಸೇನೆ ಮತ್ತು ನೌಕಾಪಡೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಪ್ರವಾಹದಲ್ಲಿ ಸಿಲುಕಿ ಅತಂತ್ರ ಸ್ಥಿತಿಯಲ್ಲಿರುವವರನ್ನು ರಕ್ಷಿಸಲು ಹೆಲಿಕಾಪ್ಟರ್ ಮತ್ತು ಸ್ಪೀಡ್‍ಬೋಟ್‍ಗಳನ್ನು ಬಳಸಲಾಗುತ್ತಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಭಾರತವು ಉದ್ದೇಶಪೂರ್ವಕವಾಗಿ ತನ್ನ ಅಣೆಕಟ್ಟುಗಳಿಂದ ನೀರನ್ನು ಹೊರಬಿಡುವ ಮೂಲಕ ಬಾಂಗ್ಲಾದೇಶದಲ್ಲಿ ಪ್ರವಾಹ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಮಧ್ಯಂತರ ಸರಕಾರದ ಕ್ರೀಡಾ ಸಚಿವ ಆಸಿಫ್ ಮಹ್ಮೂದ್ ಆರೋಪಿಸಿದ್ದಾರೆ. ಆರೋಪವನ್ನು ನಿರಾಕರಿಸಿರುವ ಭಾರತದ ವಿದೇಶಾಂಗ ಸಚಿವಾಲಯ ಜಲಾನಯನ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಈ ವರ್ಷದ ಅತೀ ಹೆಚ್ಚು ಮಳೆಯಾಗುತ್ತಿದೆ. ನದಿ, ಸರೋವರಗಳ ಹೆಚ್ಚುವರಿ ನೀರು ಕೆಳಗಿನ ಪ್ರದೇಶಕ್ಕೆ ಹರಿಯುವುದು ಸ್ವಾಭಾವಿಕ ಪ್ರಕ್ರಿಯೆ' ಎಂದಿದೆ.