ಪಾಕಿಸ್ತಾನ ಜೊತೆಗಿನ 1971ರ ವಿವಾದಗಳ ಇತ್ಯರ್ಥಕ್ಕೆ ಬಾಂಗ್ಲಾ ಸಿದ್ಧ: ಸಚಿವ ನಹೀದ್ ಇಸ್ಲಾಂ

Update: 2024-09-05 02:42 GMT

ನಹೀದ್ ಇಸ್ಲಾಂ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿದ್ಯಾರ್ಥಿ ಪ್ರತಿಭಟನಾಕಾರ (PC: X.com)

ಢಾಕಾ: ಪ್ರಜಾಸತ್ತಾತ್ಮಕ ದಕ್ಷಿಣ ಏಷ್ಯಾವನ್ನು ಖಾತರಿಪಡಿಸುವ ಸಲುವಾಗಿ ಪಾಕಿಸ್ತಾನದ ಜತೆಗಿನ 1971ರ ವಿಮೋಚನೆಯ ಯುದ್ಧಕ್ಕೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಿ, ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಗೊಳಿಸಲು ಬಾಂಗ್ಲಾದೇಶ ಸಿದ್ಧ ಎಂದು ಮಧ್ಯಂತರ ಸರ್ಕಾರದ ಪ್ರಸಾರ ಮತ್ತು ಐಟಿ ಖಾತೆ ಸಚಿವ ನಹೀದ್ ಇಸ್ಲಾಂ ಪ್ರಕಟಿಸಿದ್ದಾರೆ. ಢಾಕಾದಲ್ಲಿರುವ ಪಾಕಿಸ್ತಾನಿ ರಾಯಭಾರಿ ಜತೆ ನಡೆಸಿದ ಸಭೆಯ ಬಳಿಕ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಮಾಜಿ ಪ್ರಧಾನಿ ಶೇಕ್ ಹಸೀನಾ ಅಧಿಕಾರಾವಧಿಯಲ್ಲಿ, ಅದರಲ್ಲೂ ಮುಖ್ಯವಾಗಿ ಬಾಂಗ್ಲಾದೇಶ ಜಮಾಅತೆ ಇಸ್ಲಾಮಿ ಮುಖಂಡರನ್ನು 1971ರ ಯುದ್ಧಾಪರಾಧದ ಕಾರಣಕ್ಕಾಗಿ ಜೈಲಿಗೆ ತಳ್ಳಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹಳಸಿತ್ತು.

ಕಳೆದ ತಿಂಗಳು ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಚಳವಳಿಯ ಮುಖಂಡರಲ್ಲಿ ಒಬ್ಬರಾದ ನಹೀದ್ ಇಸ್ಲಾಮ್ ಅವರು ಮುಹಮ್ಮದ್ ಯೂನುಸ್ ನೇತೃತ್ವದ ಸರ್ಕಾರದ ಹಿರಿಯ ಮುಖಂಡರು ಹಾಗೂ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿ ಸೈಯ್ಯದ್ ಅಹ್ಮದ್ ಮಅರೂಫ್ ಜತೆಗೆ ನಡೆಸಿದ ಸರಣಿ ಸಭೆಯ ಬಳಿಕ ಈ ಹೇಳಿಕೆ ನೀಡಿದ್ದಾರೆ.

1971ರ ಪ್ರಶ್ನೆಗಳನ್ನು ಬಗೆಹರಿಸಲು ಪಾಕಿಸ್ತಾನ ಬಯಸಿದೆ ಎಂದು ಸೆಪ್ಟೆಂಬರ್ 1ರಂದು ನಹೀದ್ ಇಸ್ಲಾಂ ಜತೆಗೆ ಸಭೆ ನಡೆಸುವ ವೇಳೆ ಮಅರೂಫ್ ಸ್ಪಷ್ಟಪಡಿಸಿದ್ದರು. ಈ ವಿಷಯವನ್ನು ಚರ್ಚಿಸಲು ಹಿಂದಿನ ಸರ್ಕಾರ ಅವಕಾಶ ನೀಡಿರಲಿಲ್ಲ ಮತ್ತು 1971ರ ಸಮಸ್ಯೆಯನ್ನು ಜೀವಂತವಾಗಿಯೇ ಇರಿಸಿತು ಎಂದು ಅವರು ಆಪಾದಿಸಿದ್ದರು, ಇದನ್ನು ಬಹಳ ಹಿಂದೆಯೇ ಬಗೆಹರಿಸಬಹುದಿತ್ತು ಹಾಗೂ ಬಾಂಗ್ಲಾದೇಶದ ಜತೆಗಿನ ಸಂಬಂಧವನ್ನು ಸುಧಾರಿಸಲು ಪಾಕಿಸ್ತಾನ ಬಯಸಿದೆ ಎಂದು ಮಅರೂಫ್ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News