ಗಾಝಾ ನಾಗರಿಕರ ರಕ್ಷಣೆಗೆ ಇಸ್ರೇಲ್ ಪ್ರಯತ್ನಿಸುತ್ತದೆ: ನೆತನ್ಯಾಹು
ಟೆಲ್ ಅವೀವ್ : ಗಾಝಾದಲ್ಲಿ ನಡೆಯುತ್ತಿರುವ ಯುದ್ಧವು ಹಮಾಸ್ ತಂತ್ರಗಳಿಂದಾಗಿ ಸವಾಲಾಗಿದ್ದು ಗಾಝಾ ಯುದ್ಧದಲ್ಲಿ ನಾಗರಿಕರ ಸಾವು ನೋವುಗಳನ್ನು ತಪ್ಪಿಸಲು ಇಸ್ರೇಲ್ ಪ್ರಯತ್ನಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಬೈಡನ್ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ನೆತನ್ಯಾಹು ‘ಹಮಾಸ್ ವಿಭಿನ್ನ ರೀತಿಯ ಶತ್ರುವಾದ್ದರಿಂದ ಇದು ವಿಭಿನ್ನ ರೀತಿಯ ಯುದ್ಧವಾಗಿದೆ. ಈ ಯುದ್ಧದಲ್ಲಿ ನಾವು ಮುಂದುವರಿದಂತೆಲ್ಲಾ, ನಾಗರಿಕರನ್ನು ಅಪಾಯದ ವ್ಯಾಪ್ತಿಯಿಂದ ದೂರ ಇರಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇವೆ’ ಎಂದರು. ಬಳಿಕ ಮಾತನಾಡಿದ ಬೈಡನ್ ‘ನಾಗರಿಕರ ಸಾವುನೋವನ್ನು ತಡೆಯಲು ಇಸ್ರೇಲ್ ಅಮೆರಿಕದೊಂದಿಗೆ ಕಾರ್ಯ ನಿರ್ವಹಿಸಲಿದೆ’ ಎಂದರು.
‘ನಿಮ್ಮ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ನಿಮಗೆ ಅಮೆರಿಕದ ಬೆಂಬಲ ಮುಂದುವರಿಯಲಿದೆ. ಈ ಪ್ರದೇಶದಾದ್ಯಂತ ಅಮಾಯಕ ನಾಗರಿಕರಿಗೆ ಇನ್ನಷ್ಟು ದುರಂತ ತಪ್ಪಿಸಲು ಅಮೆರಿಕ ಬದ್ಧವಾಗಿದೆ’ ಎಂದು ಇಸ್ರೇಲ್ ಮುಖಂಡರನ್ನು ಉದ್ದೇಶಿಸಿ ಬೈಡನ್ ಹೇಳಿದ್ದಾರೆ.