ಕೆನಡಾದಲ್ಲಿ `ಎಕ್ಸ್‌ಪ್ರೆಸ್‌ ಎಂಟ್ರಿ' ವ್ಯವಸ್ಥೆಯಲ್ಲಿ ಬದಲಾವಣೆ

Update: 2024-12-25 14:44 GMT

ಸಾಂದರ್ಭಿಕ ಚಿತ್ರ | PC : freepik.com

ಒಟ್ಟಾವ : ಕೆನಡಾವು ತನ್ನ `ಎಕ್ಸ್‌ಪ್ರೆಸ್‌ ಎಂಟ್ರಿ' ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದ್ದು, ಇದರೊಂದಿಗೆ ಮುಂದಿನ ವರ್ಷದಿಂದ ಕೆನಡಾದಲ್ಲಿ ಕಾಯಂ ನಿವಾಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ನು ಮುಂದೆ ಉದ್ಯೋಗದ ಅವಕಾಶಕ್ಕೆ ಹೆಚ್ಚುವರಿ ಅಂಕಗಳನ್ನು ಪಡೆಯುವುದಿಲ್ಲ ಎಂದು ಸರಕಾರದ ಮೂಲಗಳು ಹೇಳಿವೆ.

ಈ ಕ್ರಮವು ಉತ್ತಮ ಉದ್ಯೋಗಾವಕಾಶ ಅರಸಿ ಕೆನಡಾಕ್ಕೆ ತೆರಳಬಯಸುವ ಭಾರತೀಯ ಪ್ರಜೆಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಸರ್ಕಾರವು ವಂಚನೆಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ನುರಿತ ಕಾರ್ಮಿಕರಿಗೆ ಅವಕಾಶವನ್ನು ಮುಂದುವರಿಸಿದೆ ಎಂದು ಕೆನಡಾದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆಯ ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ.

ವಲಸೆಯು ಯಾವಾಗಲೂ ಕೆನಡಾದ ಯಶಸ್ಸಿನ ಮೂಲಾಧಾರವಾಗಿದೆ ಮತ್ತು ಕೆನಡಾಕ್ಕೆ ಅತ್ಯುತ್ತಮ ಮತ್ತು ಉಜ್ವಲ ಪ್ರತಿಭೆಗಳನ್ನು ಸ್ವಾಗತಿಸಲು ನಾವು ಬದ್ಧವಾಗಿದ್ದೇವೆ. ಇದರಿಂದಾಗಿ ಪ್ರತಿಯೊಬ್ಬರೂ ಅವರು ಅಭಿವೃದ್ಧಿ ಹೊಂದಲು ಅಗತ್ಯವಿರುವ ಗುಣಮಟ್ಟದ ಉದ್ಯೋಗ, ಮನೆಗಳು ಮತ್ತು ಬೆಂಬಲಗಳನ್ನು ಪಡೆಯುತ್ತಾರೆ ಎಂದವರು ಹೇಳಿದ್ದಾರೆ.

ಈ ಯೋಜನೆ ಜಾರಿಗೆ ಬಂದ ಬಳಿಕ ಎಲ್ಲಾ `ಎಕ್ಸ್‌ಪ್ರೆಸ್‌ ಎಂಟ್ರಿ' ಆಕಾಂಕ್ಷಿಗಳ (ಈಗ ದೇಶದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವವರೂ ಸೇರಿದಂತೆ) ಮೇಲೆ ಪರಿಣಾಮ ಬೀರಲಿದೆ. ಆದರೆ, ಈಗಾಗಲೇ ಅರ್ಜಿ ಸಲ್ಲಿಸಲು ಆಹ್ವಾನಗಳನ್ನು ಸ್ವೀಕರಿಸಿದವರು , ಅಥವಾ ಶಾಶ್ವತ ನಿವಾಸಿ ಸ್ಥಾನಮಾನಕ್ಕೆ `ವಲಸೆ ನಿರಾಶ್ರಿತರು ಮತ್ತು ಪೌರತ್ವ' ಇಲಾಖೆಗೆ ಸಲ್ಲಿಸಿದ ಅರ್ಜಿಯು ಪರಿಶೀಲನೆಯ ಪ್ರಕ್ರಿಯೆಯಲ್ಲಿದ್ದವರು ಹೊಸ ಯೋಜನೆಯಿಂದ ಯಾವುದೇ ಪರಿಣಾಮಕ್ಕೆ ಒಳಗಾಗುವುದಿಲ್ಲ ಎಂದು ಮೂಲಗಳು ಹೇಳಿವೆ. `ಎಕ್ಸ್‌ಪ್ರೆಸ್‌ ಎಂಟ್ರಿ'ಯಡಿ ಉದ್ಯೋಗದ ಆಫರ್ ಪಡೆದಿರುವ ಎಲ್ಲಾ ಅಭ್ಯರ್ಥಿಗಳಿಗೂ ಸರಕಾರದ ಈ ನಡೆ ಅನ್ವಯಿಸಲಿದೆ.

ಕೆನಡಾದ ಪ್ರಮುಖ ವಲಸೆ ವ್ಯವಸ್ಥೆ `ಎಕ್ಸ್‌ಪ್ರೆಸ್‌ ಎಂಟ್ರಿ'ಯಡಿ ವಿವಿಧ ಯೋಜನೆಗಳ ಮೂಲಕ ಕಾಯಂ ನಿವಾಸಕ್ಕಾಗಿ ಸಲ್ಲಿಸಿದ ಅರ್ಜಿಗಳ ಮೇಲ್ವಿಚಾರಣೆ ಮಾಡುತ್ತದೆ. `ಫೆಡರಲ್ ಸ್ಕಿಲ್ಡ್ ವರ್ಕರ್ ಪ್ರೋಗ್ರಾಂ, ಫೆಡರಲ್ ಸ್ಕಿಲ್ಡ್ ಟ್ರೇಡ್ಸ್ ಪ್ರೋಗ್ರಾಂ, ದಿ ಕೆನಡಿಯನ್ ಎಕ್ಸ್‍ಪೀರಿಯನ್ಸ್ ಕ್ಲಾಸ್, ಪ್ರಾವಿನ್ಷಿಯಲ್ ನಾಮಿನೀ ಪ್ರೋಗ್ರಾಂ' ಮುಂತಾದ ಯೋಜನೆಗಳು ಇದರಡಿ ಬರುತ್ತವೆ.

►ಭಾರತೀಯರ ಮೇಲೆ ಪರಿಣಾಮ

2023ರಲ್ಲಿ `ಎಕ್ಸ್‌ಪ್ರೆಸ್‌ ಎಂಟ್ರಿ' ಆಹ್ವಾನದಲ್ಲಿ ಭಾರತಕ್ಕೆ ಸಿಂಹಪಾಲು ಸಂದಿದ್ದು ಆ ವರ್ಷ ಕಾಯಂ ನಿವಾಸಕ್ಕೆ ಅರ್ಜಿ ಸಲ್ಲಿಸಲು ಆಹ್ವಾನ ಪಡೆದವರಲ್ಲಿ 47.2% ಭಾರತೀಯ ಪ್ರಜೆಗಳು. ಅಂದರೆ 52,106 ಭಾರತೀಯರು ಅರ್ಜಿ ಸಲ್ಲಿಸಲು ಆಹ್ವಾನ ಪಡೆದಿದ್ದಾರೆ. ಆದರೆ ಈಗ ಉದ್ಯೋಗ ಅವಕಾಶದ ಅಂಕಗಳನ್ನು ರದ್ದುಪಡಿಸಿದರೆ ಭಾರತ ಹಾಗೂ ಇತರ ದೇಶಗಳ ಅರ್ಜಿದಾರರು ಗಮನಾರ್ಹ ಸವಾಲುಗಳನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News