ಇಸ್ರೇಲ್ ನ ಹೊಸ ಷರತ್ತುಗಳಿಂದ ಗಾಝಾ ಯುದ್ಧವಿರಾಮ ವಿಳಂಬ : ಹಮಾಸ್ ಆರೋಪ
ಗಾಝಾ : ಮಾತುಕತೆ ಮುಂದುವರಿಯುತ್ತಿದ್ದರೂ ಇಸ್ರೇಲ್ ಒಡ್ಡುತ್ತಿರುವ ಹೊಸ ಷರತ್ತುಗಳು ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ವಿಳಂಬಗೊಳಿಸುತ್ತಿದೆ ಎಂದು ಹಮಾಸ್ ಬುಧವಾರ ಆರೋಪಿಸಿದೆ.
ಖತರ್, ಈಜಿಪ್ಟ್ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಖತರ್ ರಾಜಧಾನಿ ದೋಹಾದಲ್ಲಿ ಗಾಝಾ ಕದನ ವಿರಾಮ ಒಪ್ಪಂದದ ಬಗ್ಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ಪರೋಕ್ಷ ಮಾತುಕತೆ ನಡೆದಿದ್ದು ಒಪ್ಪಂದದ ಭರವಸೆಯನ್ನು ಪುನರುಜ್ಜೀವನಗೊಳಿಸಿದೆ.
`ಯುದ್ಧ ವಿರಾಮ, ಕೈದಿಗಳ ವಿನಿಮಯ ಕುರಿತ ಮಾತುಕತೆ ದೋಹಾದಲ್ಲಿ ಅತ್ಯಂತ ಗಂಭೀರ ರೀತಿಯಲ್ಲಿ ನಡೆಯುತ್ತಿದೆ. ಆದರೆ ಆಕ್ರಮಣಕಾರರು(ಇಸ್ರೇಲ್), ಪಡೆಗಳನ್ನು ಹಿಂದೆ ಪಡೆಯುವುದು, ಕೈದಿಗಳ ವಿನಿಮಯ ಮತ್ತು ಸ್ಥಳಾಂತರಿತ ಜನರ ವಾಪಸಾತಿಗೆ ಸಂಬಂಧಿಸಿ ಹೊಸ ಷರತ್ತುಗಳನ್ನು ಮುಂದಿರಿಸಿದ್ದಾರೆ. ಕದನ ವಿರಾಮ ಒಪ್ಪಂದವನ್ನು ವಿಳಂಬಗೊಳಿಸುವುದು ಅವರ ಉದ್ದೇಶವಾಗಿರಬಹುದು' ಎಂದು ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ. ಆದರೆ ಇಸ್ರೇಲ್ ಯಾವ ಷರತ್ತುಗಳನ್ನು ಮುಂದಿರಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ಕದನ ವಿರಾಮ ಒಪ್ಪಂದ ಮಾತುಕತೆಯಲ್ಲಿ ಕೆಲವು ಮುನ್ನಡೆ ಸಾಧ್ಯವಾಗಿದೆ ಎಂದು ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ಇಸ್ರೇಲಿ ಪ್ರತಿನಿಧಿಗಳು ಮಹತ್ವದ ಮಾತುಕತೆಗಳ ಬಳಿಕ ಖತರ್ ನಿಂದ ಹಿಂದಿರುಗಿದ್ದಾರೆ ಎಂದು ಮಂಗಳವಾರ ಇಸ್ರೇಲ್ ಪ್ರಧಾನಿಯ ಕಚೇರಿ ಹೇಳಿದೆ. ಈ ಹಿಂದೆ ಹಲವಾರು ಸುತ್ತಿನ ಮಾತುಕತೆಯ ಬಳಿಕ 2023ರ ಅಂತ್ಯದಲ್ಲಿ ಇಸ್ರೇಲ್ ಮತ್ತು ಹಮಾಸ್ ಗಾಝಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ ಒಂದೇ ವಾರದಲ್ಲಿ ಕದನ ವಿರಾಮದ ಉಲ್ಲಂಘನೆಯಾಗಿತ್ತು. ಆ ಬಳಿಕ ಮಾತುಕತೆ ಮುಂದುವರಿದರೂ ಹಲವು ಸವಾಲುಗಳು ಎದುರಾಗಿವೆ. ಗಾಝಾದಲ್ಲಿ ಶಾಶ್ವತ ಕದನ ವಿರಾಮ ಮತ್ತು ಯುದ್ಧೋತ್ತರ ಗಾಝಾದಲ್ಲಿ ಆಡಳಿತ ವ್ಯವಸ್ಥೆಯ ಬಗ್ಗೆ ಭಿನ್ನಾಭಿಪ್ರಾಯ ಮೂಡಿದೆ. ಗಾಝಾಕ್ಕೆ ಹಮಾಸ್ ಮತ್ತೆ ಮರಳಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಇಸ್ರೇಲ್ ಪಟ್ಟು ಹಿಡಿದಿದೆ. ಹಮಾಸ್ ಅನ್ನು ತೊಲಗಿಸುವ ತನಕ ಯುದ್ಧವನ್ನು ನಿಲ್ಲಿಸುವುದಿಲ್ಲ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಲವು ಬಾರಿ ಹೇಳಿದ್ದರು. ಗಾಝಾ ಮತ್ತು ಈಜಿಪ್ಟ್ ಗಡಿಗಳ ನಡುವಿನ ಫಿಲಾಡೆಲ್ಫಿ ಕಾರಿಡಾರ್ ನ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡಲೂ ಇಸ್ರೇಲ್ ಒಪ್ಪುತ್ತಿಲ್ಲ. ಇದು ಕದನ ವಿರಾಮ ಒಪ್ಪಂದ ಅಂತಿಮಗೊಳ್ಳಲು ಎದುರಾಗಿರುವ ಪ್ರಮುಖ ತಡೆಯಾಗಿವೆ.