ಕೆನಡಾ: ದೀಪಾವಳಿ ಕಾರ್ಯಕ್ರಮಕ್ಕೆ ಖಾಲಿಸ್ತಾನಿ ಬೆಂಬಲಿಗರ ದಾಳಿ; ದಾಂಧಲೆ

Update: 2023-11-24 17:35 GMT

Photo : PTI

ಒಂಟಾರಿಯೊ: ಕೆನಡದ ಬ್ರಾಂಪ್ಟನ್ನಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಖಾಲಿಸ್ತಾನಿ ಧ್ವಜಗಳನ್ನು ಹಿಡಿದುಕೊಂಡಿದ್ದ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದೆ ಹಾಗೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದವರ ಮೇಲೆ ಕಲ್ಲೆಸೆದಿದೆ ಎಂದು ‘ಖಾಲ್ಸಾ ವೊಕ್ಸ್ ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೆನಡದಲ್ಲಿ ಭಾರತ ವಿರೋಧಿ ತೀವ್ರವಾದಿಗಳನ್ನು ಮಟ್ಟ ಹಾಕುವಂತೆ ಹಾಗೂ ಆರಾಧನಾ ಸ್ಥಳಗಳ ಮೇಲಿನ ದಾಳಿಗಳನ್ನು ಹತ್ತಿಕ್ಕುವಂತೆ ಆಗ್ರಹಿಸಿ, ಭಾರತವು ಕೆನಡಕ್ಕೆ ಬಲವಾದ ಸಂದೇಶವೊಂದನ್ನು ರವಾನಿಸಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಇದೊಂದು ಧಾರ್ಮಿಕ ದ್ವೇಷದಿಂದ ಕೂಡಿದ ದಾಳಿಯೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವುದಾಗಿ ಕೆನಡದ ಪೊಲೀಸರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ತಿಳಿಸಿದೆ. ಈ ಘಟನೆಯು ಸಂತ್ರಸ್ತ ಸಮುದಾಯದ ಸದಸ್ಯರಲ್ಲಿ ತೀವ್ರ ಆಕ್ರೋಶವನ್ನು ಸೃಷ್ಟಿಸಿದೆಯೆಂದು ಅದು ಹೇಳಿದೆ.

‘‘ ಕೆನಡದ ಬ್ರಾಂಪ್ಟನ್ನಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆಯ ಕಾರ್ಯಕ್ರಮದ ಮೇಲೆ ದಾಳಿ ನಡೆದಿರುವುದು ಅತ್ಯಂತ ದುರದೃಷ್ಟಕರ. ಇದೊಂದು ಸಿಖ್ಖರು ಹಾಗೂ ಹಿಂದೂಗಳ ನಡುವಿನ ಜಗಳವೆಂದು ಬಣ್ಣಿಸುವ ಮೂಲಕ ಕೆನಡದ ಮಾಧ್ಯಮಗಳು ಕೂಡಾ ಈ ಘಟನೆಯನ್ನು ಸಣ್ಣದು ಮಾಡುತ್ತಿವೆ. ಆದರೆ ವಾಸ್ತವಿಕವಾಗಿ ಇದೊಂದು ಧಾರ್ಮಿಕ ದ್ವೇಷದ ಕಿಡಿ ಹೊತ್ತಿಸುವ ಉದ್ದೇಶದಿಂದ ಖಾಲಿಸ್ತಾನದ ತೀವ್ರವಾದಿಗಳು ನಡೆಸಿದ ಕೃತ್ಯವಾಗಿದೆ ಎಂದು ಖಾಲ್ಸಾ ವೋಕ್ಸ್, ಸುದ್ದಿ ವೀಕ್ಷಕರ ಹೇಳಿಕೆಯೊಂದನ್ನು ವರದಿಯಲ್ಲಿ ಉಲ್ಲೇಖಿಸಿದೆ.

ದಾಳಿಯ ಸಂದರ್ಭ ಖಾಲಿಸ್ತಾನಿ ಧ್ವಜಗಳನ್ನು ಪ್ರದರ್ಶಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ ಎಂದವರು ಹೇಲಿದ್ದಾರೆ.

ಖಾಲಿಸ್ತಾನಿ ತೀವ್ರವಾದಿಗಳಿಗೆ ಕೆನಡವು ತಿಳಿದೋ ಅಥವಾ ತಿಳಿಯದೆಯೋ ವೇದಿಕೆಯನ್ನು ಒದಗಿಸುತ್ತಿರುವ ಬಗ್ಗೆ ವರದಿಯು ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News