ಟಿಬೆಟ್ ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ಕ್ರಮಕ್ಕೆ ಚೀನಾ ಸೂಚನೆ

Update: 2024-09-17 14:46 GMT

PC : PTI

ಬೀಜಿಂಗ್ : ಕಳೆದ ವಾರ ಟಿಬೆಟ್‍ಗೆ ಭೇಟಿ ನೀಡಿದ್ದ ಚೀನಾದ ಉನ್ನತ ಭದ್ರತಾ ಅಧಿಕಾರಿ ಟಿಬೆಟ್‍ನಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ದೃಢ ನಿಗ್ರಹ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ವರದಿಯಾಗಿದೆ.

ಕಳೆದ ವಾರ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಉನ್ನತ ಭದ್ರತಾ ಸಂಸ್ಥೆ `ದಿ ಸೆಂಟ್ರಲ್ ಪೊಲಿಟಿಕಲ್ ಆ್ಯಂಡ್ ಲೀಗಲ್ ಅಫೇರ್ಸ್ ಕಮಿಷನ್'ನ ಮುಖ್ಯಸ್ಥ ಚೆನ್ ವೆಂಕ್ವಿಂಗ್ ಟಿಬೆಟಿಯನ್ ಸ್ವಾಯತ್ತ ಪ್ರದೇಶಗಳು ಹಾಗೂ ಯುನಾನ್, ಸಿಚುವಾನ್, ಗಾನ್ಸು ಮತ್ತು ಕ್ವಿಂಘಾಯ್‍ನಾದ್ಯಂತ 10 ಪ್ರಾಂತಗಳಿಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದರು.

ಪ್ರತ್ಯೇಕತಾವಾದಿಗಳ ವಿರುದ್ಧ ದೃಢ ನಿಗ್ರಹ ಕ್ರಮಗಳಿಗೆ ಕರೆ ನೀಡಿದ ಅವರು, ಸ್ಥಿರತೆ ಕಾಪಾಡಿಕೊಳ್ಳಲು ಮತ್ತು ಸ್ವಾತಂತ್ರ್ಯ ಚಟುವಟಿಕೆಗಳ ಬಗ್ಗೆ ಗಮನ ಹರಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ `ಚೀನಾ ಮಾರ್ನಿಂಗ್ ಪೋಸ್ಟ್' ಸೋಮವಾರ ವರದಿ ಮಾಡಿದೆ.

ಅಕ್ಟೋಬರ್ 1ರಂದು `ಪೀಪಲ್ಸ್ ರಿಪಬ್ಲಿಕ್'ನ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಟಿಬೆಟ್‍ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುತ್ತಿದೆ. ಚೀನಾದ ಉನ್ನತ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳೂ ಟಿಬೆಟ್‍ಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದ್ದಾರೆ.

ಕಳೆದ ವಾರ ಟಿಬೆಟ್‍ನ ನ್ಯಾಯಾಲಯಕ್ಕೆ ಭೇಟಿ ನೀಡಿದ್ದ ಚೀನಾದ ಸುಪ್ರೀಂಕೋರ್ಟ್ ಅಧ್ಯಕ್ಷ ಝಾಂಗ್ ಜುನ್ ` ಹಿಂಸಾತ್ಮಕ ಭಯೋತ್ಪಾದನೆ, ಜನಾಂಗೀಯ ಪ್ರತ್ಯೇಕತಾವಾದ ಮತ್ತು ಇತರ ಗಂಭೀರ ಕ್ರಿಮಿನಲ್ ಅಪರಾಧಗಳ ಬಗ್ಗೆ ಸೂಕ್ತ ಗಮನ ವಹಿಸಿ ಕಠಿಣ ಶಿಕ್ಷೆ ವಿಧಿಸುವುದು ಅಗತ್ಯವಾಗಿದೆ ಎಂದಿದ್ದರು. ಈ ತಿಂಗಳ ಆರಂಭದಲ್ಲಿ ಟಿಬೆಟ್‍ನಲ್ಲಿನ ಸಾರ್ವಜನಿಕ ಅಭಿಯೋಜಕರ ಕಚೇರಿಗೆ ಭೇಟಿ ನೀಡಿದ್ದ ಸುಪ್ರೀಂಕೋರ್ಟ್‍ನ ಅಧಿಕಾರಿ ಯಿಂಗ್ ಯಾಂಗ್ ` ಎಲ್ಲಾ ರೀತಿಯ ಪ್ರತ್ಯೇಕತಾವಾದಿ ಒಳನುಸುಳುವಿಕೆ, ವಿಧ್ವಂಸಕ ಚಟುವಟಿಕೆಗಳು ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧಗಳನ್ನು ಕಾನೂನಿಗೆ ಅನುಸಾರವಾಗಿ ಕಠಿಣವಾಗಿ ಹತ್ತಿಕ್ಕುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಈ ಮಧ್ಯೆ, ಟಿಬೆಟಿಯನ್ ಜನರ ಆಧ್ಯಾತ್ಮಿಕ ಮುಖಂಡ ದಲಾಯಿ ಲಾಮಾ ಜತೆ ಮಾತುಕತೆ ನಡೆಸುವಂತೆ ಚೀನಾದ ಮೇಲೆ ಒತ್ತಡ ಹೇರುವ ಹೊಸ ಕಾನೂನನ್ನು ಎರಡು ತಿಂಗಳ ಹಿಂದೆ ಅನುಮೋದಿಸುವ ಮೂಲಕ ಅಮೆರಿಕವು ಟಿಬೆಟ್‍ಗೆ ನೀಡುತ್ತಿರುವ ಬೆಂಬಲವನ್ನು ಹೆಚ್ಚಿಸಿದೆ. ಈ ಕಾಯ್ದೆಯು ಟಿಬೆಟ್‍ಗೆ ಅಮೆರಿಕದ ಬೆಂಬಲವನ್ನು ಹೆಚ್ಚಿಸಿದೆ. ಚೀನಾ ಸರಕಾರದಿಂದ ಟಿಬೆಟ್‍ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮತ್ತು ನೇರವಾಗಿ ಎದುರಿಸಲು ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.

ಜತೆಗೆ `ಪುರಾತನ ಕಾಲದಿಂದಲೂ ಟಿಬೆಟ್ ಚೀನಾದ ಭಾಗವಾಗಿತ್ತು ಎಂಬ ಚೀನಾದ ಪ್ರತಿಪಾದನೆಯನ್ನೂ ಇದು ತಿರಸ್ಕರಿಸುತ್ತದೆ ಮತ್ತು ಯಾವುದೇ ಪೂರ್ವ ಷರತ್ತುಗಳಿಲ್ಲದೆ ಚೀನಾ ಹಾಗೂ ದಲಾಯಿ ಲಾಮಾ, ಅಥವಾ ಅವರ ಪ್ರತಿನಿಧಿ ಅಥವಾ ಟಿಬೆಟಿಯನ್ ಸಮುದಾಯದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಮುಖಂಡರ ನಡುವೆ ಮಾತುಕತೆಗೆ ಒತ್ತಡ ಹೆಚ್ಚಿಸುತ್ತದೆ.

ನ್ಯೂಯಾರ್ಕ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಲಾಯಿ ಲಾಮಾರನ್ನು ಕಳೆದ ತಿಂಗಳು ಭೇಟಿಯಾಗಿದ್ದ ಅಮೆರಿಕ ಸರಕಾರದ ಉನ್ನತ ಅಧಿಕಾರಿ ಟಿಬೆಟ್‍ಗೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದ್ದರು. ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದ ಚೀನಾ ಸರಕಾರ, ಅಮೆರಿಕಕ್ಕೆ ಪ್ರಬಲ ಆಕ್ಷೇಪ ಸಲ್ಲಿಸಿದೆ ಎಂದು ವರದಿಯಾಗಿದೆ.

►ಟಿಬೆಟ್ ಬಿಕ್ಕಟ್ಟು ಪರಿಹಾರ ಕಾಯ್ದೆ

ಜುಲೈಯಲ್ಲಿ ಅಮೆರಿಕವು `ಟಿಬೆಟ್ ಬಿಕ್ಕಟ್ಟು ಪರಿಹಾರ ಕಾಯ್ದೆ'ಯನ್ನು ಅನುಮೋದಿಸಿದೆ. ಈ ಕಾಯ್ದೆಯು ಟಿಬೆಟ್‍ಗೆ ಅಮೆರಿಕದ ಬೆಂಬಲವನ್ನು ಹೆಚ್ಚಿಸುತ್ತದೆ ಹಾಗೂ ಹಿಮಾಲಯದ ಪ್ರದೇಶದಲ್ಲಿರುವ ಟಿಬೆಟ್‍ನ ಸ್ಥಾನಮಾನ ಮತ್ತು ಆಡಳಿತದ ಕುರಿತ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಚೀನಾ ಮತ್ತು ದಲಾಯಿ ಲಾಮಾ ನಡುವಿನ ಮಾತುಕತೆಯನ್ನು ಉತ್ತೇಜಿಸುತ್ತದೆ.

ಅಮೆರಿಕ ಸೆನೆಟ್ ಮತ್ತು ಕಾಂಗ್ರೆಸ್ ಅನುಮೋದಿಸಿರುವ ಮಸೂದೆಗೆ ಸಹಿ ಹಾಕಿದ ಅಧ್ಯಕ್ಷ ಜೋ ಬೈಡನ್ ` ಇದು ಟಿಬೆಟಿಯನ್ನರ ಮಾನವ ಹಕ್ಕುಗಳನ್ನು ಮುಂದುವರಿಸಲು ಮತ್ತು ಅವರ ವಿಶಿಷ್ಟ ಭಾಷೆ, ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳಿಗೆ ಅಮೆರಿಕದ ಉಭಯ ಪಕ್ಷೀಯ(ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್) ಬದ್ಧತೆಯನ್ನು ತೋರಿಸುತ್ತದೆ' ಎಂದಿದ್ದರು. ಜತೆಗೆ, ಟಿಬೆಟ್ ಕುರಿತ ಭಿನ್ನಾಭಿಪ್ರಾಯ, ವಿವಾದವನ್ನು ಇತ್ಯರ್ಥ ಪಡಿಸಲು ದಲಾಯಿ ಲಾಮಾ ಅಥವಾ ಅವರ ಪ್ರತಿನಿಧಿಗಳೊಂದಿಗೆ ಮಾತುಕತೆಗೆ ಮುಂದಾಗುವಂತೆ ಚೀನಾಕ್ಕೆ ಕರೆ ನೀಡಿದ್ದರು. ಟಿಬೆಟ್ ಬಿಕ್ಕಟ್ಟು ಪರಿಹಾರ ಕಾಯ್ದೆಯನ್ನು ಚೀನಾ ವಿರೋಧಿಸಿದ್ದು ಇದು ಅಸ್ಥಿರಗೊಳಿಸುವ ಕಾಯ್ದೆ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News