ಜಿ20 ಸಭೆಯಲ್ಲಿ ತನ್ನ ಪಾತ್ರವನ್ನು ಚೀನಾವೇ ನಿರ್ಧರಿಸಬೇಕು: ಅಮೆರಿಕ
ವಾಷಿಂಗ್ಟನ್: ಹೊಸದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ತಾನು ಯಾವ ಪಾತ್ರ ವಹಿಸಬೇಕು ಎಂಬುದನ್ನು ಚೀನಾವೇ ನಿರ್ಧರಿಸಬೇಕಿದೆ. ಶೃಂಗಸಭೆಗೆ ಬಂದು ಅದನ್ನು ಹಾಳು ಮಾಡಬೇಕೆಂದು ಬಯಸಿದರೆ ಆ ಆಯ್ಕೆಯೂ ಅವರಿಗೆ ಲಭ್ಯವಿದೆ ಎಂದು ಅಮೆರಿಕ ಹೇಳಿದೆ.
ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾರತ-ಚೀನಾ ಗಡಿ ಉದ್ವಿಗ್ನತೆಯಿಂದ ಜಿ20 ಶೃಂಗಸಭೆಯ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ` ಉಭಯ ದೇಶಗಳ ನಡುವಿನ ಉದ್ವಿಗ್ನತೆ ಜಿ20 ಶೃಂಗಸಭೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಚೀನಾ ನಿರ್ಧರಿಸಬೇಕಾಗಿದೆ. ಶೃಂಗಸಭೆಗೆ ಬಂದು ಅದನ್ನು ಹಾಳುಗೆಡಹುವ ಪಾತ್ರವನ್ನು ಅವರು ನಿರ್ವಹಿಸಲು ಬಯಸುವುದಾದರೆ ಆ ಆಯ್ಕೆಯೂ ಅವರ ಎದುರಿಗಿದೆ' ಎಂದರು.
`ಶೃಂಗಸಭೆಯ ಅಧ್ಯಕ್ಷನಾಗಿ ಭಾರತವು ಚೀನಾದ ಉಪಸ್ಥಿತಿಯನ್ನು ಪ್ರೋತ್ಸಾಹಿಸಲಿದೆ ಎಂದು ನಾವು ಭಾವಿಸುತ್ತೇವೆ. ಅಮೆರಿಕ ಅಥವಾ ಇತರ ಯಾವುದೇ ಜಿ20 ಸದಸ್ಯ ದೇಶವೂ ಇದನ್ನೇ ಮಾಡುತ್ತಿತ್ತು. ಶೃಂಗಸಭೆಗೆ ಬಂದು ಹವಾಮಾನ, ಬಹುರಾಷ್ಟ್ರೀಯ ಅಭಿವೃದ್ಧಿ, ಬ್ಯಾಂಕ್ ಸುಧಾರಣೆ, ಸಾಲ ಪರಿಹಾರ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ರಚನಾತ್ಮಕ ರೀತಿಯಲ್ಲಿ ಪಾಲ್ಗೊಳ್ಳುವಂತೆ, ಭೌಗೋಳಿಕ ರಾಜಕೀಯ ಪ್ರಶ್ನೆಗಳನ್ನು ಬದಿಗಿರಿಸಿ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ನೆರವಾಗುವ ನಿಟ್ಟಿನಲ್ಲಿ ಗಮನ ಹರಿಸುವಂತೆ ಚೀನಾವನ್ನು ಪ್ರೋತ್ಸಾಹಿಸುತ್ತಿತ್ತು' ಎಂದವರು ಹೇಳಿದ್ದಾರೆ.
ಜಿ20 ಶೃಂಗಸಭೆಯಲ್ಲಿ ವಾಸ್ತವಿಕ ಪ್ರಗತಿಯನ್ನು ಅಮೆರಿಕ ಎದುರು ನೋಡುತ್ತಿದೆ. ಸಭೆಯಲ್ಲಿ ಜಿ20 ಸದಸ್ಯ ದೇಶಗಳ ರಚನಾತ್ಮಕ ಭಾಗವಹಿಸುವಿಕೆಯ ಅಗತ್ಯವಿದೆ. ಹವಾಮಾನ, ಆರೋಗ್ಯ, ಡಿಜಿಟಲ್ ತಂತ್ರಜ್ಞಾನ ಇತ್ಯಾದಿ ಪ್ರಮುಖ ಆದ್ಯತೆಗಳ ವಿಷಯದಲ್ಲಿ ಪ್ರಗತಿ ಸಾಧಿಸುವ ಜತೆಗೆ, ಹೆಚ್ಚು ಅಂತರ್ಗತ ಡಿಜಿಟಲ್ ತಂತ್ರಜ್ಞಾನ, ಎಐ(ಕೃತಕ ಬುದ್ಧಿಮತ್ತೆ) ಅಭಿವೃದ್ಧಿಯ ಕುರಿತು ಹೆಚ್ಚು ಜವಾಬ್ದಾರಿಯುತ ಮಾರ್ಗ ಮತ್ತು ವಿಧಾನದ ಬಗ್ಗೆಯೂ ಪ್ರಗತಿ ಸಾಧಿಸುವ ವಿಶ್ವಾಸವಿದೆ' ಎಂದು ಸುಲಿವಾನ್ ಹೇಳಿದ್ದಾರೆ.
ಉಕ್ರೇನ್‍ನಲ್ಲಿ ರಶ್ಯ ನಡೆಸುತ್ತಿರುವ ಕಾನೂನು ಬಾಹಿರ ಯುದ್ಧವು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಧ್ವಂಸಗೊಳಿಸಿದ್ದು ಕಡುಬಡ ದೇಶಗಳು ಇದರ ಪರಿಣಾಮ ಎದುರಿಸುವಂತಾಗಿದೆ. ಅಂತರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಸನದು(ಚಾರ್ಟರ್)ನ ಸಿದ್ಧಾಂತ, ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆ ನಿಯಮಗಳಿಗೆ ಸಂಬಂಧಿಸಿದಂತೆ ಸ್ಥಾಪಿಸಲಾದ ನ್ಯಾಯಯುತ ಮತ್ತು ಸ್ಥಿರ ಶಾಂತಿ ನೆಲೆಸಬೇಕು ಎಂಬುದು ಅಮೆರಿಕದ ಆಶಯವಾಗಿದೆ ಎಂದು ಸುಲಿವಾನ್ ಹೇಳಿದ್ದಾರೆ.