ಚೀನಾದಲ್ಲಿ ಕೋವಿಡ್ ಮರುಕಳಿಸುವ ಸಾಧ್ಯತೆ: ವರದಿ
Update: 2023-11-13 18:07 GMT
ಬೀಜಿಂಗ್: ಪ್ರಸ್ತುತ ಚಳಿಗಾಲದಲ್ಲಿ ಕೋವಿಡ್-19 ಸೋಂಕು ಮರುಕಳಿಸುವ ಬಗ್ಗೆ ಚೀನಾದ ತಜ್ಞರು ಎಚ್ಚರಿಕೆ ನೀಡಿದ್ದು ವಯಸ್ಸಾದವರು ಮತ್ತು ದುರ್ಬಲರು ತಕ್ಷಣ ಲಸಿಕೆ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ.
ಅಕ್ಟೋಬರ್ ನಲ್ಲಿ ದೇಶದಾದ್ಯಂತ ಹೊಸ ಕೋವಿಡ್ ಸೋಂಕಿನ 209 ಪ್ರಕರಣ ಹಾಗೂ 24 ಸಾವು ಸಂಭವಿಸಿದ್ದು, ಪ್ರಚಲಿತ ತಳಿ ಎಕ್ಸ್ ಬಿ ಬಿ ರೂಪಾಂತರವಾಗಿದೆ ಎಂದು ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಸುದ್ಧಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಚಳಿಗಾಲದಲ್ಲಿ ಕೋವಿಡ್-19 ಸೋಂಕಿನ ಸಣ್ಣ ಅಲೆ ಏಳಬಹುದು. ಆದ್ದರಿಂದ ಹಿರಿಯ ನಾಗರಿಕರು, ವೃದ್ಧರು ಆದಷ್ಟು ಬೇಗನೆ ಲಸಿಕೆ ಹಾಕಿಕೊಳ್ಳಬೇಕು ಎಂದು ಚೀನಾದ ಉನ್ನತ ಶ್ವಾಸಕೋಶದ ಕಾಯಿಲೆ ತಜ್ಞ ಝೋಂಗ್ ನನ್ಷಾನ್ ಎಚ್ಚರಿಕೆ ನೀಡಿದ್ದಾರೆ. ಚಳಿಗಾಲದಲ್ಲಿ ಕೋವಿಡ್-19 ಸೋಂಕಿನ ಜತೆಗೆ ಸಂಭಾವ್ಯ ಸಹ-ಸೋಂಕುಗಳಲ್ಲಿಯೂ ಹೆಚ್ಚಳವಾಗಬಹುದು ಎಂದು ಶೆಂಝೆನ್ ಪ್ರಾಂತದ `ಥರ್ಡ್ ಪೀಪಲ್ಸ್ ಆಸ್ಪತ್ರೆ'ಯ ಮುಖ್ಯಸ್ಥ ಲು ಹಾಂಗ್‍ಝೊವ್ ಹೇಳಿದ್ದಾರೆ.