ಜಿ20 `ಸಾಲ ಪುನರಚನೆ ಪ್ಯಾಕೇಜ್'ಗೆ ಚೀನಾ ವಿರೋಧ
Update: 2023-09-07 17:00 GMT
ಬೀಜಿಂಗ್: ಮೂರು ದುರ್ಬಲ ರಾಷ್ಟ್ರಗಳಾದ ಜಾಂಬಿಯಾ, ಘಾನಾ ಮತ್ತು ಇಥಿಯೋಪಿಯಾಗಳ ಸಾರ್ವಭೌಮ ಸಾಲ ಪುನರ್ರಚನೆಯ ಭಾಗವಾಗಿ ಹವಾಮಾನ ಹೊಂದಾಣಿಕೆ ಷರತ್ತುಗಳನ್ನು ಸೇರಿಸುವ ಜಿ20 ಆರ್ಥಿಕ ಯೋಜನೆಯ ಪ್ರಸ್ತಾವನೆಯನ್ನು ಚೀನಾ ವಿರೋಧಿಸಿದೆ ಎಂದು ಮೂಲಗಳು ಹೇಳಿವೆ.
ಭಾರತದ ಅಧ್ಯಕ್ಷತೆಯಲ್ಲಿನ ಜಿ20 ಆರ್ಥಿಕ ಯೋಜನೆಯು ಸಾಮಾನ್ಯ ಚೌಕಟ್ಟಿನಡಿಯಲ್ಲಿ ಮೂರು ದೇಶಗಳ ಸಾಲ ಪುನರ್ರಚನೆಯ ದೀರ್ಘಾವಧಿಯ ಬಾಕಿ ಇರುವ ಪ್ರಕರಣಗಳನ್ನು ಬಹುತೇಕ ಪರಿಹರಿಸಲು ಸಮರ್ಥವಾಗಿದೆ ಮತ್ತು ಈ ಬಗ್ಗೆ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ.
ಸೆಪ್ಟಂಬರ್ 9 ಮತ್ತು 10ರಂದು ಹೊಸದಿಲ್ಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಈ ಕುರಿತ ಒಮ್ಮತದ ಅಭಿಪ್ರಾಯ ರೂಪುಗೊಂಡು ಅಂತಿಮ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಆದರೆ ಹವಾಮಾನ ಹೊಂದಾಣಿಕೆ ವಿಷಯದಲ್ಲಿ ಚೀನಾ ಕೆಲವು ಆಕ್ಷೇಪಗಳನ್ನು ಹೊಂದಿದೆ ಮತ್ತು ಇಲ್ಲಿಯವರೆಗೆ ಆ ಕಾರ್ಯಸೂಚಿಯನ್ನು ಹಿಂದಕ್ಕೆ ತಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.