ಆಸ್ಟ್ರೇಲಿಯಾಗೆ ಕೊಕೇನ್ ಕಳ್ಳಸಾಗಣೆ: ಭಾರತ ಮೂಲದ ದಂಪತಿಗೆ ಶಿಕ್ಷೆ
ಲಂಡನ್: ಗುಜರಾತ್ನಲ್ಲಿ ಅವಳಿ ಕೊಲೆ ಆರೋಪಿಗಳಾಗಿರುವ ದಂಪತಿಗೆ ಕೊಕೇನ್ ಕಳ್ಳಸಾಗಾಣಿಕೆ ಆರೋಪದಲ್ಲಿ ಇಲ್ಲಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಭಾರತ ಸರ್ಕಾರದ ಮನವಿಯ ಹೊರತಾಗಿಯೂ ಈ ದಂಪತಿಯನ್ನು ಲಂಡನ್ನಿಂದ ಭಾರತಕ್ಕೆ ಗಡೀಪಾರು ಮಾಡಲು ಈ ಮುನ್ನ ಲಂಡನ್ ಕೋರ್ಟ್ ನಿರಾಕರಿಸಿತ್ತು. ಆದರೆ ಲಂಡನ್ನಿಂದ ಆಸ್ಟ್ರೇಲಿಯಾಗೆ ವಾಣಿಜ್ಯ ವಿಮಾನದಲ್ಲಿ 600 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಸಾಗಾಣಿಕೆ ಮಾಡುತ್ತಿದ್ದ ಆರೋಪದಲ್ಲಿ ಸೋಮವಾರ ದಂಪತಿಗೆ ಶಿಕ್ಷೆ ವಿಧಿಸಲಾಗಿದೆ.
ನೈರೋಬಿಯಲ್ಲಿ ಜನಿಸಿದ ಬ್ರಿಟಿಷ್ ಭಾರತೀಯ ಮಹಿಳೆ ಆರ್ತಿ ಧೀರ್ (59) ಕುಟುಂಬ ಮೂಲತಃ ಪಂಜಾಬ್ನ ಗುರುದಾಸ್ಪುರದವರು. ಆಕೆಯ 35 ವರ್ಷದ ಪತಿ ಕವಲ್ ಜೀತ್ ಸಿನ್ಹ ರೈಜಡಾ ಗುಜರಾತ್ನ ಕೇಶೋಡ್ ಮೂಲದವನಾಗಿದ್ದು, ಹನ್ವೆಲ್ನಲ್ಲಿ ವಾಸವಿದ್ದ. ಈ ದಂಪತಿ ಲೋಹದ ಟೂಲ್ಬಾಕ್ಸ್ ಲೋಡ್ನಲ್ಲಿ 514 ಕೆ.ಜಿ. ಕೊಕೇನನ್ನು ಆಸ್ಟ್ರೇಲಿಯಾಗೆ ರಫ್ತು ಮಾಡಿದ ಆರೋಪದ ಬಗ್ಗೆ ರಾಷ್ಟ್ರೀಯ ಅಪರಾಧ ಏಜನ್ಸಿ ತನಿಖೆ ನಡೆಸಿತ್ತು.
ಆಸ್ಟ್ರೇಲಿಯಾದ ಗಡಿ ಭದ್ರತಾ ಪಡೆ 2021ರ ಮೇ ತಿಂಗಳಲ್ಲಿ ಲಂಡನ್ನಿಂದ ಬಂದಿದ್ದ ಕೊಕೇನನ್ನು ಪತ್ತೆ ಮಾಡಿದ ಬಳಿಕ ಇದರ ಹಿಂದೆ ಇದ್ದ ವ್ಯಕ್ತಿಗಳನ್ನು ಎನ್ಸಿಎ ತನಿಖಾಧಿಕಾರಿಗಳು ಪತ್ತೆ ಮಾಡಿದ್ದರು. ಈ ಸರಕನ್ನು ಧೀರ್ ಮತ್ತು ರೈಜಡಾ ಕಳುಹಿಸಿದ್ದರು ಹಾಗೂ ಡ್ರಗ್ಸ್ ಕಳ್ಳಸಾಗಾಣಿಕೆ ಮಾಡುವ ಏಕೈಕ ಉದ್ದೇಶದಿಂದ ವೀಫ್ಲೈ ಫ್ರೈಟ್ ಸರ್ವೀಸಸ್ ಆರಂಭಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿತ್ತು.