ಸಂಘರ್ಷ ಪೀಡಿತ ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯಕ್ಕೆ ಅಮೆರಿಕ ತಡೆ

Update: 2023-12-09 18:15 GMT

Photo: PTI

ವಿಶ್ವಸಂಸ್ಥೆ: ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾಗಬೇಕೆಂದು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯರಲ್ಲಿ 13 ಮಂದಿ ಬೆಂಬಲಿಸಿದ್ದರೂ ಅಮೆರಿಕ ವೀಟೊ ಅಧಿಕಾರ ಪ್ರಯೋಗಿಸಿ ನಿರ್ಣಯವನ್ನು ತಡೆಹಿಡಿದಿದೆ.

ನಿರ್ಣಯದ ಪರ 13 ದೇಶಗಳು ಮತ ಚಲಾಯಿಸಿದ್ದರೆ ಬ್ರಿಟನ್ ಮತದಾನದಿಂದ ದೂರ ಉಳಿದಿತ್ತು.

ಹಮಾಸ್ ನಿವಾರಣೆ ಮತ್ತು ಆ ವಲಯದಲ್ಲಿ ಹಿಂಸಾಚಾರದ ಚಕ್ರವನ್ನು ತಡೆಯುವುದು ತನ್ನ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಆದರೆ ಅಮೆರಿಕದ ಕ್ರಮವನ್ನು ಹಮಾಸ್, ಅರಬ್ ಮಿತ್ರರಾಷ್ಟ್ರಗಳು ಮತ್ತು ವಿಶ್ವಸಂಸ್ಥೆ ನೆರವು ಏಜೆನ್ಸಿಗಳು ಖಂಡಿಸಿವೆ. ಗಾಝಾದಲ್ಲಿ ಸಂಘರ್ಷ ಮುಂದುವರಿದರೆ ನಾಗರಿಕ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಮುರಿದು ಬೀಳುವ ಜತೆಗೆ ಈಜಿಪ್ಟ್ಗೆ ಸಾಮೂಹಿಕ ವಲಸೆಯ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕವನ್ನು ಇಸ್ರೇಲ್ ದಾರಿತಪ್ಪಿಸಿದೆ ಎಂದು ಫೆಲೆಸ್ತೀನ್ ಆರೋಪಿಸಿದರೆ, ಹಮಾಸ್ ನಿರ್ಮೂಲನೆ ಮಾಡಲು ನೆರವಾಗಬೇಕು ಎಂದು ಇಸ್ರೇಲ್ ಆಗ್ರಹಿಸಿದೆ.

ವಿಶ್ವಸಂಸ್ಥೆಯಲ್ಲಿ ಅರಬ್ ದೇಶಗಳ ಪರವಾಗಿ ಯುಎಇ ಮಂಡಿಸಿದ ಕರಡು ನಿರ್ಣಯದಲ್ಲಿ `ಗಾಝಾದಲ್ಲಿ ತಕ್ಷಣ ಮಾನವೀಯ ಕದನವಿರಾಮ ಜಾರಿ, ಎಲ್ಲಾ ಒತ್ತೆಯಾಳುಗಳ ತಕ್ಷಣದ ಮತ್ತು ಬೇಷರತ್ ಬಿಡುಗಡೆ, ಜೊತೆಗೆ ಮಾನವೀಯ ಪ್ರವೇಶಕ್ಕೆ ಅವಕಾಶ ನೀಡಬೇಕು' ಎಂದು ಒತ್ತಾಯಿಸಲಾಗಿದೆ. ಜತೆಗೆ, ಗಾಝಾ ಪಟ್ಟಿಯಲ್ಲಿನ ದುರಂತ ಮಾನವೀಯ ಪರಿಸ್ಥಿತಿ ಮತ್ತು ಫೆಲೆಸ್ತೀನಿಯನ್ ನಾಗರಿಕರ ಸಂಕಟದ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು ಇಸ್ರೇಲ್ ಹಾಗೂ ಫೆಲೆಸ್ತೀನಿಯನ್ ನಾಗರಿಕರ ರಕ್ಷಣೆಗೆ ಆಗ್ರಹಿಸಲಾಗಿದೆ. ನಿರ್ಣಯದ ಮೇಲಿನ ಮತದಾನಕ್ಕೂ ಮುನ್ನ ಭದ್ರತಾ ಮಂಡಳಿ ಸದಸ್ಯರನ್ನು ಭೇಟಿ ಮಾಡಿದ ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ನ ಖಾಯಂ ವೀಕ್ಷಕ ರಿಯಾದ್ ಮನ್ಸೂರ್ `ಫೆಲೆಸ್ತೀನಿಯನ್ ಜನರ ವಿನಾಶ ಮತ್ತು ಸ್ಥಳಾಂತರವನ್ನು ನೀವು ವಿರೋಧಿಸುವುದಾದರೆ ನಿರ್ಣಯವನ್ನು ಬೆಂಬಲಿಸಿ' ಎಂದು ಒತ್ತಾಯಿಸಿದರು.

ಬಳಿಕ ಮಾತನಾಡಿದ ವಿಶ್ವಸಂಸ್ಥೆ ಪ್ರತಿನಿಧಿ ಗಿಲಾಡ್ ಎರ್ಡನ್ `ಕದನ ವಿರಾಮಕ್ಕೆ ಕರೆ ನೀಡುವುದು ಹಮಾಸ್ ನಡೆಸಿದ ಉದ್ದೇಶಪೂರ್ವಕ ದೌರ್ಜನ್ಯವನ್ನು ಕ್ಷಮಿಸಲಾಗಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ವಿಶ್ವಸಂಸ್ಥೆ ಕದನ ವಿರಾಮವನ್ನು ಬಯಸುವುದಾದರೆ ಈ ಹಿಂದೆ ಎರಡು ಬಾರಿ ಒಪ್ಪಂದ ಮುರಿದ ಹಮಾಸ್ ಅನ್ನು ಆಗ್ರಹಿಸಬೇಕು' ಎಂದರು.

`ಗಾಝಾದಲ್ಲಿನ ವಿನಾಶದ ಪ್ರಮಾಣವು 1945ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಡ್ರೆಸ್ಡೆನ್ ಮೇಲಿನ ಬಾಂಬ್ದಾಳಿಯನ್ನು ಮೀರಿಸುತ್ತದೆ. ವೈದ್ಯಕೀಯ ವ್ಯವಸ್ಥೆ, ಉಪಕರಣಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಪೂರ್ವಕ ಗುರಿಯಾಗಿಸಿದ ದಾಳಿ ಖಂಡನಾರ್ಹ ಎಂದು ವಿಶ್ವಸಂಸ್ಥೆಗೆ ಯುಎಇ ಉಪ ಖಾಯಂ ಪ್ರತಿನಿಧಿ ಮುಹಮ್ಮದ್ ಅಬುಶಹಾಬ್ ಹೇಳಿದರು.

ನಿರ್ಣಯದ ಸಹ ಪ್ರಾಯೋಜಕ ಚೀನಾದ ಖಾಯಂ ಪ್ರತಿನಿಧಿ ಝಾಂಗ್ ಜುನ್ ` ಈ ಮಾನವೀಯ ದುರಂತವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಯಾವುದೇ ಕಾಯುವಿಕೆ ಅಥವಾ ವಿಳಂಬವು ಹೆಚ್ಚು ಸಾವು ಎಂದರ್ಥ. ಈ ಹಂತದಲ್ಲಿ ಕದನ ವಿರಾಮ ಮಾತ್ರ ಸೂಕ್ತ ಪರಿಹಾರ' ಎಂದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News