ಶ್ವೇತಭವನದಲ್ಲಿ ದೀಪಾವಳಿ ಆಚರಣೆ | ಅಧ್ಯಕ್ಷ ಜೋ ಬೈಡನ್ ಆತಿಥ್ಯ

Update: 2024-10-29 16:01 GMT
PC : X \ @airnewsalerts

ವಾಶಿಂಗ್ಟನ್ : ಶ್ವೇತಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ದೀಪಾವಳಿಯನ್ನು ಆಚರಿಸಿದರು. ಅಮೆರಿಕ ಸೆನೆಟ್ ಕಾಂಗ್ರೆಸ್ ಸಂಸದರು, ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಸೇರಿದಂತೆ 600ಕ್ಕೂ ಅಧಿಕ ಮಂದಿ ಭಾರತೀಯ ಅಮೆರಿಕನ್ನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ವೇತಭವನದಲ್ಲಿ ಅತಿಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ‘‘ ರಾಷ್ಟ್ರಾಧ್ಯಕ್ಷನಾಗಿ, ಶ್ವೇತಭವನದಲ್ಲಿ ಹಿಂದೆಂದಿಗಿಂತಲೂ ಅತೀ ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತಿರುವ ದೀಪಾವಳಿ ಕಾರ್ಯಕ್ರಮಕ್ಕೆ ಅತಿಥ್ಯ ವಹಿಸಲು ನನಗೆ ಹೆಮ್ಮೆಯೆನಿಸುತ್ತದೆ. ಸೆನೆಟರ್, ಉಪಾಧ್ಯಕ್ಷ ಹಾಗೂ ಅಧ್ಯಕ್ಷನಾಗಿ ನನ್ನ ಪಾಲಿಗೆ ಇದೊಂದು ದೊಡ್ಡ ಸಂಗತಿಯಾಗಿದೆ” ಎಂದರು.

ಭಾರತೀಯ ಅಮೆರಿಕನ್ ಮೂಲದ ಸಾಮಾಜಿಕ ಹೋರಾಟಗಾರ್ತಿ ಸೃಷ್ಟಿ ಅಮುಲಾ, ಅಮೆರಿಕದ ಸರ್ಜನ್ ಜನರಲ್, ಕನ್ನಡಿಗ ಡಾ. ವಿವೇಕ್ ಎಚ್.ಮೂರ್ತಿ ಸೇರಿದಂತೆ ಭಾರತೀಯ ಮೂಲದ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ದೀಪಾವಳಿ ಸಂದೇಶದ ರೆಕಾರ್ಡಡ್ ವೀಡಿಯೊವನ್ನು ಸಮಾರಂಭದಲ್ಲಿ ಪ್ರಸಾರ ಮಾಡಲಾಯಿತು.

ಆದರೆ ಚುನಾವಣಾ ಪ್ರಚಾರದಲ್ಲಿ ವ್ಯಸ್ಥರಾಗಿರುವ ಭಾರತೀಯ ಮೂಲದವರಾದ ಡೆಮಾಕ್ರಾಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಜೋ ಬೈಡನ್ ಅವರ ಪತ್ನಿ ಡಾ. ಜಿಲ್ ಬೈಡನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

ಶ್ವೇತಭವನದ ನೀಲ ಕೊಠಡಿಯಲ್ಲಿ ದೀಪವನ್ನು ಬೆಳಗಿದ ಬೈಡನ್ ಅವರು, ಅಮೆರಿಕದ ಪ್ರಗತಿಗೆ ದಕ್ಷಿಣ ಏಶ್ಯ ಸಮುದಾಯದ ಕೊಡುಗೆಯನ್ನು ಸ್ಮರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News