ನಮ್ಮ ಮೇಲೆ ದಾಳಿ ನಡೆಸಲು ಇಸ್ರೇಲ್ ಗೆ ಸಹಾಯ ಮಾಡಬೇಡಿ: ಅರಬ್ ದೇಶಗಳು, ಅಮೆರಿಕ ಮಿತ್ರರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆ
ಟೆಹ್ರಾನ್: ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿಗೆ ಇಸ್ರೇಲ್ ಗೆ ಸಹಾಯ ಮಾಡಿದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ತನ್ನ ನೆರೆಯ ಅರಬ್ ರಾಷ್ಟ್ರಗಳಿಗೆ ಮತ್ತು ಅಮೆರಿಕ ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆಯನ್ನು ನೀಡಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇರಾನ್ ಮೇಲಿನ ಯಾವುದೇ ದಾಳಿಗೆ ಇಸ್ರೇಲ್ ಗೆ ಭೂಪ್ರದೇಶ ಅಥವಾ ವಾಯುಪ್ರದೇಶದ ಮೂಲಕ ಸಹಕಾರವನ್ನು ನೀಡಬಾರದು. ಇಸ್ರೇಲ್ ಗೆ ವಾಯು ನೆಲೆಯನ್ನು ಬಳಸಲು ಅನುವು ಮಾಡಿಕೊಡಬಾರದು ಎಂದು ಇರಾನ್ ಹೇಳಿದೆ.
ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಮತ್ತು ಕತಾರ್ ನಂತಹ ತೈಲ-ಸಮೃದ್ಧ ರಾಜ್ಯಗಳನ್ನು ಗುರಿಯಾಗಿಟ್ಟುಕೊಂಡು ರಹಸ್ಯ ರಾಜತಾಂತ್ರಿಕ ವಿಧಾನಗಳ ಮೂಲಕ ಎಚ್ಚರಿಕೆಯನ್ನು ರವಾನಿಸಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಇಸ್ರೇಲ್ ಅನ್ನು ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಅಧಿಕಾರಿಗಳು ಇರಾನ್ ನ ಪರಮಾಣು ಅಥವಾ ತೈಲ ಮೂಲಸೌಕರ್ಯದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಧ್ಯೆ ಇರಾನ್ ಅರಬ್ ರಾಷ್ಟ್ರಗಳಿಗೆ ಮತ್ತು ಅಮೆರಿಕ ಮಿತ್ರರಾಷ್ಟ್ರಗಳಿಗೆ ಎಚ್ಚರಿಕೆಯನ್ನು ರವಾನೆ ಮಾಡಿದೆ.