ಇಕ್ವೆಡಾರ್: ಜೈಲಿನಲ್ಲಿ ದಾಂಧಲೆ
ಖ್ವಿಟೊ, ಸೆ.1: ಕಾರು ಬಾಂಬ್, ಗ್ರೆನೇಡ್ ದಾಳಿ ಹಾಗೂ ಆ ಬಳಿಕ 6 ಜೈಲುಗಳಲ್ಲಿ ಕೈದಿಗಳು ದಂಗೆ ಎದ್ದು ನಡೆಸಿದ ದಾಂಧಲೆಯಿಂದ ಇಕ್ವೆಡಾರ್ನ ರಾಜಧಾನಿ ಖ್ವಿಟೊದಲ್ಲಿ ಕಾನೂನು ವ್ಯವಸ್ಥೆಗೆ ತೊಡಕಾಗಿದೆ ಎಂದು ವರದಿಯಾಗಿದೆ.
6 ಜೈಲುಗಳಲ್ಲಿ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿರುವ ಕೈದಿಗಳು 57 ಜೈಲು ಸಿಬ್ಬಂದಿಗಳು ಹಾಗೂ ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಗ್ರೆನೇಡ್ ಮತ್ತು ಬಾಂಬ್‍ದಾಳಿಯು ಸಂಘಟಿತ ಅಪರಾಧ ಗ್ಯಾಂಗ್‍ಗಳ ಬಲಪ್ರದರ್ಶನವಾಗಿದ್ದು ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಜೈಲುಗಳಲ್ಲಿ ಬುಧವಾರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿರುವುದರಿಂದ ಆಕ್ರೋಶಗೊಂಡ ಕೈದಿಗಳು ದಾಂಧಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ದೇಶದ ಪ್ರಕ್ಷುಬ್ಧ ಪ್ರಾಂತದಲ್ಲಿರುವ ಎಸ್‍ಎನ್‍ಎಐ ಜೈಲು ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಉದ್ದೇಶಿಸಿ ಕಾರು ಬಾಂಬ್ ದಾಳಿ ನಡೆದಿದೆ. ಆ ಬಳಿಕ ದೇಶದಾದ್ಯಂತದ 6 ಸೆರೆಮನೆಗಳಲ್ಲಿ ಕೈದಿಗಳು ದಾಂಧಲೆ ನಡೆಸಿ 50 ಜೈಲುಸಿಬ್ಬಂದಿ ಹಾಗೂ 7 ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಧಿಕಾರಿಗಳ ಸುರಕ್ಷತೆಯ ಬಗ್ಗೆ ನಾವು ಆತಂಕಗೊಂಡಿದ್ದೇವೆ ಎಂದು ಆಂತರಿಕ ಸಚಿವ ಜುವಾನ್ ಝಪಾಟ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಕಾರಿನೊಳಗೆ ಗ್ಯಾಸ್‍ಸಿಲಿಂಡರ್ ಇರಿಸಿ ದೂರ ನಿಯಂತ್ರಿತ ಸಾಧನ ಬಳಸಿ ಸ್ಫೋಟಿಸಲಾಗಿದೆ. ಅಲ್ಲದೆ ಮೂರು ಗ್ರೆನೇಡ್‍ಗಳನ್ನೂ ಎಸೆಯಲಾಗಿದೆ. ಸ್ಫೋಟ ನಡೆದ ಸ್ಥಳದ ಬಳಿ ಕೊಲಂಬಿಯಾ ಪ್ರಜೆಯ ಸಹಿತ 6 ಶಂಕಿತರನ್ನು ಬಂಧಿಸಲಾಗಿದೆ. ಇವರಲ್ಲಿ ಮೂವರನ್ನು 15 ದಿನದ ಹಿಂದೆ ಟ್ರಕ್ ಕಳವು, ಜನರ ಅಪಹರಣ ಪ್ರಕರಣಕ್ಕೆ ಬಂಧಿಸಿ ಬಳಿಕ ಜಾಮೀನಡಿ ಬಿಡುಗಡೆಗೊಳಿಸಲಾಗಿತ್ತು ಎಂದು ಪೊಲೀಸ್ ಇಲಾಖೆಯ ಅಧಿಕಾರಿ ಜನರಲ್ ಪಾಬ್ಲೊ ರಮಿರೆಝ್ ಹೇಳಿದ್ದಾರೆ.
ವಿಶ್ವದಲ್ಲಿ ಅತ್ಯಧಿಕ ಕೊಕೇನ್(ಮಾದಕ ವಸ್ತು) ಉತ್ಪಾದಕ ದೇಶಗಳಾದ ಕೊಲಂಬಿಯಾ ಮತ್ತು ಪೆರು ದೇಶಗಳ ನಡುವೆ ಇರುವ ಇಕ್ವೆಡಾರ್ ಕೆಲ ವರ್ಷಗಳ ಹಿಂದಿನವರೆಗೆ ಶಾಂತವಾಗಿತ್ತು. ಆದರೆ ಕ್ರಮೇಣ ಮಾದಕವಸ್ತು ಕಳ್ಳಸಾಗಣೆದಾರರ ಸ್ವರ್ಗವಾಗಿ ಮಾರ್ಪಟ್ಟಿದೆ. ಮಾದಕ ವಸ್ತು ಮಾರಾಟ ಜಾಲದವರು ಜೈಲುಗಳನ್ನು ತಮ್ಮ ವ್ಯವಹಾರ ಕೇಂದ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಜೈಲಿನಲ್ಲಿ ಸದಾ ವಿರೋಧಿ ಬಣಗಳೊಳಗೆ ಸಂಘರ್ಷ ನಡೆಯುತ್ತಿರುತ್ತದೆ.
ಬುಧವಾರ ಕೆಲವು ಕುಖ್ಯಾತ ಕೈದಿಗಳನ್ನು ಮತ್ತೊಂದು ಜೈಲಿಗೆ ವರ್ಗಾಯಿಸಿರುವುದರಿಂದ ಆಕ್ರೋಶಗೊಂಡ ಕೈದಿಗಳು ದಾಂಧಲೆ ನಡೆಸಿ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
`ಜೈಲಿನೊಳಗೆ ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮ ಸಶಸ್ತ್ರ ಪಡೆ ನಡೆಸುವ ಪ್ರಯತ್ನವನ್ನು ತಡೆಯುವುದು ಈ ದಾಳಿಯ ಉದ್ದೇಶವಾಗಿದೆ' ಎಂದು ಇಕ್ವೆಡಾರ್‍ನ ಭದ್ರತಾ ಸಚಿವ ವ್ಯಾಗ್ನರ್ ಬ್ರೇವೊ ಹೇಳಿದ್ದಾರೆ.