ಭಾರತ-ರಶ್ಯ ನಡುವೆ ಬಿರುಕು ಮೂಡಿಸುವ ಪ್ರಯತ್ನ ವ್ಯರ್ಥ: ಪಾಶ್ಚಿಮಾತ್ಯರಿಗೆ ಪುಟಿನ್ ಎಚ್ಚರಿಕೆ

Update: 2023-10-06 18:33 GMT

Photo: PTI 

ಮಾಸ್ಕೊ : ಭಾರತ ಸರಕಾರವು ತನ್ನ ನಾಗರಿಕರ ಹಿತಾಸಕ್ತಿಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಶ್ಯ-ಭಾರತದ ನಡುವೆ ಬಿರುಕು ಮೂಡಿಸಲು ಪಾಶ್ಚಿಮಾತ್ಯರು ನಡೆಸುವ ಯಾವುದೇ ಪ್ರಯತ್ನಗಳು ಅರ್ಥಹೀನವಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

`ಪಾಶ್ಚಿಮಾತ್ಯರು ತಮ್ಮ ಏಕಸ್ವಾಮ್ಯವನ್ನು ಒಪ್ಪದ ದೇಶಗಳ ನಡುವೆ ಹಗೆತನ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಭಾರತ ಸೇರಿದಂತೆ ಎಲ್ಲರಿಗೂ ಈ ಅಪಾಯವಿದೆ. ಆದರೆ ಭಾರತದ ನಾಯಕತ್ವವು ತನ್ನ ದೇಶದ ಹಿತಾಸಕ್ತಿಗಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ರಶ್ಯದಿಂದ ಭಾರತವನ್ನು ದೂರ ಸರಿಸಲು ನಡೆಸುವ ಪ್ರಯತ್ನ ಅರ್ಥಹೀನ. ಭಾರತವು ಸ್ವತಂತ್ರ ದೇಶವಾಗಿದೆ' ಎಂದು ಪುಟಿನ್ ಹೇಳಿದ್ದಾರೆ.

ಪಾಶ್ಚಿಮಾತ್ಯರು ರಶ್ಯದ ಮೇಲೆ ನಿರ್ಬಂಧಗಳನ್ನು ಹೇರಿದ ನಂತರ ರಿಯಾಯಿತಿ ದರದ ರಶ್ಯದ ತೈಲವನ್ನು ಆಮದು ಮಾಡಿಕೊಂಡಿರುವುದಕ್ಕೆ ಭಾರತದ ತೈಲ ಸಂಸ್ಕರಣಾಗಾರಗಳು ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ರಶ್ಯ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ಬಳಿಕ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ರಶ್ಯದಿಂತ ತೈಲ ಖರೀದಿಯನ್ನು ನಿಲ್ಲಿಸಿದೆ.

ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲೂ ಭಾರತೀಯರು ತಮ್ಮ ಛಾಪು ಮೂಡಿಸುತ್ತಿರುವುದರಿಂದ ರಶ್ಯದಂತೆ ಭಾರತವೂ ಯಾವುದೇ ಸೀಮಾರೇಖೆಯನ್ನು ಹೊಂದಿಲ್ಲ. ಭಾರತವು 1.5 ಶತಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ್ದು ಬಲಿಷ್ಟ ದೇಶವಾಗಿದೆ' ಎಂದು ಪುಟಿನ್ ಹೇಳಿದ್ದಾರೆ. ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಬಂಧನ ವಾರಂಟ್ ಜಾರಿಗೊಳಿಸಿದ ಬಳಿಕ ಅವರು ವಿದೇಶಕ್ಕೆ ಪ್ರಯಾಣಿಸುವುದು ಅಪರೂಪವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ, ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲೂ ಅವರು ಪಾಲ್ಗೊಂಡಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಪುಟಿನ್ `ಸಭೆಯ ಸಂದರ್ಭ ನಮ್ಮ ಮಿತ್ರರಿಗೆ ಯಾಕೆ ಸಮಸ್ಯೆ ತರಬೇಕು? ಅಲ್ಲದೆ ರಾಜಕೀಯ ಪ್ರದರ್ಶನದಲ್ಲಿ ನನಗೆ ಆಸಕ್ತಿಯಿಲ್ಲ' ಎಂದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News