ಹೊಸ ಶೀತಲ ಸಮರಕ್ಕೆ ಬಾಹ್ಯಶಕ್ತಿಗಳ ಪ್ರಯತ್ನ: ಎಸ್‍ಸಿಒ ಶೃಂಗಸಭೆಯಲ್ಲಿ ಕ್ಸಿಜಿಂಪಿಂಗ್ ಎಚ್ಚರಿಕೆ
ಬೀಜಿಂಗ್: ನಮ್ಮ ವಲಯದಲ್ಲಿ ಹೊಸ ಶೀತಲ ಸಮರಕ್ಕೆ ನಾಂದಿ ಹಾಡಲು ಬಾಹ್ಯಶಕ್ತಿಗಳು ಪ್ರಯತ್ನ ನಡೆಸುತ್ತಿವೆ ಎಂದು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಎಚ್ಚರಿಕೆ ನೀಡಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ವರ್ಚುವಲ್ ವೇದಿಕೆಯ ಮೂಲಕ ನಡೆದ ಎಸ್ಸಿಒ(ಶಾಂಘೈ ಸಹಕಾರ ಸಂಘಟನೆ) ಸಭೆಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಶಾಂತಿಯ ರಕ್ಷಣೆಗೆ ಎಸ್ಸಿಒ ಸದಸ್ಯ ದೇಶಗಳು ಶ್ರಮಿಸುವ ಜತೆಗೆ, ಸಹಜ ಭದ್ರತೆಯನ್ನು ಖಚಿತಪಡಿಸುವಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಶೃಂಗಸಭೆಯಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಾಕಿಸ್ತಾನದ ಪ್ರಧಾನಿ ಶಹಬಾಝ್ ಶರೀಫ್ ಮತ್ತು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಇತರ ಸದಸ್ಯದೇಶಗಳ ಮುಖಂಡರು ಪಾಲ್ಗೊಂಡಿದ್ದರು.
ಪರಸ್ಪರ ಹಿತಾಸಕ್ತಿಯ ರಕ್ಷಣೆ ಸಹಿತ ಸದಸ್ಯ ದೇಶಗಳು ಪರಸ್ಪರರ ಮೇಲೆ ಗೌರವ, ವಿಶ್ವಾಸ ಇರಿಸಿಕೊಂಡರೆ ಪ್ರಾದೇಶಿಕ ಸ್ಥಿರತೆಗೆ ಪೂರಕವಾಗಲಿದೆ ಎಂದ ಜಿಂಪಿಂಗ್, ಪ್ರಾಬಲ್ಯ ಸಾಧನೆ ಮತ್ತು ಅಧಿಕಾರದ ರಾಜಕಾರಣವನ್ನು ವಿರೋಧಿಸಬೇಕು ಹಾಗೂ ಜಾಗತಿಕ ಆಡಳಿತ ವ್ಯವಸ್ಥೆಯನ್ನು ನ್ಯಾಯಯುತ ಮತ್ತು ಹೆಚ್ಚು ಸಮಾನವಾಗಿಸಬೇಕಾಗಿದೆ ಎಂದು ಪರೋಕ್ಷವಾಗಿ ಅಮೆರಿಕವನ್ನು ಟೀಕಿಸಿದರು. ನಮ್ಮ ಪ್ರದೇಶದ ಸಮಗ್ರ ಮತ್ತು ದೀರ್ಘಾವಧಿಯ ಹಿತಾಸಕ್ತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ನಮ್ಮ ವಿದೇಶಾಂಗ ನೀತಿ ಸ್ವತಂತ್ರವಾಗಿರಬೇಕು.
ನಮ್ಮ ಪ್ರದೇಶದಲ್ಲಿ ಹೊಸ ಶೀತಲ ಸಮರ ಅಥವಾ ಶಿಬಿರ ಆಧರಿತ ಘರ್ಷಣೆ, ಮುಖಾಮುಖಿಯನ್ನು ಪ್ರಚೋದಿಸುವ ಬಾಹ್ಯಶಕ್ತಿಗಳ ವಿರುದ್ಧ ಹೆಚ್ಚು ಜಾಗರೂಕರಾಗಿರಬೇಕು. ನಮ್ಮ ಆಂತರಿಕ ವ್ಯವಹಾರದಲ್ಲಿ ಬಾಹ್ಯಶಕ್ತಿಗಳು ಮೂಗು ತೂರಿಸುವುದನ್ನು ದೃಢವಾಗಿ ತಿರಸ್ಕರಿಸಬೇಕು. ನಮ್ಮ ಪ್ರಗತಿಯ ಭವಿಷ್ಯ ನಮ್ಮ ಕೈಯಲ್ಲಿಯೇ ಇರಬೇಕು. ಬಹುಪಕ್ಷೀಯತೆಯನ್ನು ಎತ್ತಿಹಿಡಿಯುವ ಮತ್ತು ಜಾಗತಿಕ ಆಡಳಿತವನ್ನು ಸುಧಾರಿಸುವ ಪ್ರಯತ್ನವಾಗಬೇಕಿದೆ. ಸಂವಾದ ಮತ್ತು ಚರ್ಚೆಯ ಮೂಲಕ ಅಂತರಾಷ್ಟ್ರೀಯ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಜಾಗತಿಕ ಭದ್ರತಾ ಉಪಕ್ರಮವನ್ನು ಕಾರ್ಯಗತಗೊಳಿಸುವಲ್ಲಿ ಚೀನಾ ಎಲ್ಲರ ಜತೆಗೂ ಕಾರ್ಯನಿರ್ವಹಿಸಲು ಸಿದ್ಧ ಎಂದು ಜಿಂಪಿಂಗ್ ಹೇಳಿದ್ದಾರೆ.
ಎಸ್ಸಿಒ ಭದ್ರತಾ ಸಹಕಾರವನ್ನು ಪರಿಷ್ಕರಿಸುವ ಮತ್ತು ಜಂಟಿ ಕಾರ್ಯಾಚರಣೆಯ ಅಗತ್ಯವಿದೆ. ಭಯೋತ್ಪಾದನೆ, ಪ್ರತ್ಯೇಕತಾವಾದ, ಉಗ್ರವಾದ, ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧವನ್ನು ಮಟ್ಟಹಾಕುವಲ್ಲಿ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಚೀನಾದ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ.