ಆಹಾರ ದುರಂತದ ಅಂಚಿನಲ್ಲಿ ಸುಡಾನ್: ವಿಶ್ವಸಂಸ್ಥೆ ಎಚ್ಚರಿಕೆ
ಜಿನೆವಾ: ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಯ ನಡುವೆ ಕಳೆದ 8 ತಿಂಗಳಿಂದ ಮುಂದುವರಿದಿರುವ ಸಂಘರ್ಷದಿಂದ ಜರ್ಝರಿತಗೊಂಡಿರುವ ಸುಡಾನ್‍ಗೆ ದೈನಂದಿನ ಬಳಕೆಯ ಆಹಾರ ನೆರವನ್ನು ನಿರಂತರ ಪೂರೈಸದಿದ್ದರೆ ಆ ದೇಶ ಹಸಿವಿನ ವಿಪತ್ತಿಗೆ ಸಾಕ್ಷಿಯಾಗಲಿದೆ ಎಂದು ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್‍ಪಿ) ಎಚ್ಚರಿಕೆ ನೀಡಿದೆ.
ಸುಡಾನ್‍ನ ಸಂಘರ್ಷ ವಲಯಗಳಲ್ಲಿನ ಕುಟುಂಬಗಳು ಮುಂದಿನ ಬೇಸಿಗೆ ವೇಳೆಗೆ ಕ್ಷಾಮದಂತಹ ಹಸಿವನ್ನು ಅನುಭವಿಸಬಹುದು. ಯುದ್ಧದಿಂದ ಧ್ವಂಸಗೊಂಡ ರಾಜಧಾನಿ ಖಾರ್ಟಮ್‍ನಲ್ಲಿ ಕೆಲವರು ದೈನಂದಿನ ಒಂದೇ ಊಟಕ್ಕೆ ತೃಪ್ತಿಪಡುವಂತಾಗಿದೆ. ಮತ್ತು ಪರಿಸ್ಥಿತಿ ಸುಧಾರಿಸದಿದ್ದರೆ ಇದೂ ಕೈತಪ್ಪುವ ಅಪಾಯವಿದೆ.
ಖಾರ್ಟಮ್ ಸೇರಿದಂತೆ ಸಂಘರ್ಷದ ಹಾಟ್‍ಸ್ಪಾಟ್ ಎಂದು ಗುರುತಿಸಿಕೊಂಡಿರುವ ಪ್ರದೇಶಗಳಿಗೆ ವಿಶ್ವಸಂಸ್ಥೆಯ ನೆರವನ್ನು ತಲುಪಿಸಲು ಸಮಸ್ಯೆಯಾಗುತ್ತಿದೆ. ಸಮಸ್ಯೆ ಪರಿಹಾರಗೊಳ್ಳದಿದ್ದರೆ ಮುಂದಿನ ವರ್ಷದ ಆರಂಭದಲ್ಲೇ ಸುಡಾನ್‍ನ ಕೆಲವು ಭಾಗಗಳು ಆಹಾರದ ಕೊರತೆಯಿಂದ ಹಸಿವಿನ ದುರಂತಕ್ಕೆ ಜಾರಲಿದೆ. ಎಪ್ರಿಲ್ 15ರಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 7 ದಶಲಕ್ಷ ಜನತೆ ಸ್ಥಳಾಂತರಗೊಂಡಿದ್ದಾರೆ. ಜತೆಗೆ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ಪಶ್ಚಿಮದ ದರ್ಫುರ್ ಪ್ರಾಂತ, ದಕ್ಷಿಣದ ಕೊರ್ಡೊಫಾನ್ ಪ್ರಾಂತ ಹಾಗೂ ರಾಜಧಾನಿ ಖಾರ್ಟಮ್‍ಗಳು ತೀವ್ರ ಅಪಾಯದ ವಲಯದಲ್ಲಿವೆ. ಸುಡಾನ್‍ನಲ್ಲಿ ಸುಮಾರು 18 ದಶಲಕ್ಷ ಜನತೆಗೆ ಮಾನವೀಯ ಆಹಾರದ ನೆರವಿನ ಅಗತ್ಯವಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ದುಪ್ಪಟ್ಟಿಗಿಂತಲೂ ಅಧಿಕ ಎಂದು ಡಬ್ಲ್ಯೂಎಫ್‍ಪಿ ಹೇಳಿದೆ.
ಒಂದು ಸಂದರ್ಭದಲ್ಲಿ `ಪೂರ್ವ ಆಫ್ರಿಕಾದ ಭವಿಷ್ಯದ ಆಹಾರದ ಖಣಜ' ಎಂದು ಬಣ್ಣಿಸಲ್ಪಟ್ಟಿದ್ದ ಸುಡಾನ್‍ನಲ್ಲಿ ಈಗ ಸುಗ್ಗಿಯ ಕಾಲದಲ್ಲೂ(ಅಕ್ಟೋಬರ್ ನಿಂದ ಫೆಬ್ರವರಿ) ಆಹಾರದ ತೀವ್ರ ಕೊರತೆ ಕಾಣಿಸಿಕೊಂಡಿರುವುದು ವಿಪರ್ಯಾಸವಾಗಿದೆ ಎಂದು ಹೇಳಿಕೆ ತಿಳಿಸಿದೆ.
ಯುದ್ಧಾಪರಾಧದ ತನಿಖೆಗೆ ಆಗ್ರಹ
ಸುಡಾನ್‍ನಲ್ಲಿ ಭುಗಿಲೆದ್ದಿರುವ ಅಂತರ್ಯುದ್ಧದಲ್ಲಿ ಎರಡೂ ಪಡೆಗಳು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿದ್ದು ಹೊಣೆಗಾರರನ್ನು ಗುರುತಿಸಲು ತನಿಖೆ ನಡೆಯಬೇಕು ಎಂದು ಮಾನವ ಹಕ್ಕುಗಳ ಏಜೆನ್ಸಿ `ಹ್ಯೂಮನ್ ರೈಟ್ಸ್ ವಾಚ್' ಆಗ್ರಹಿಸಿದೆ. ಸುಡಾನ್‍ನಲ್ಲಿ ಯುದ್ಧದಲ್ಲಿ ನಿರತರಾಗಿರುವ ಎರಡೂ ತಂಡಗಳೂ ನಾಗರಿಕರ ಮೇಲೆ ವಿವೇಚನಾರಹಿತ ದಾಳಿಗಳನ್ನು ಮಾಡಿದ್ದಾರೆ, ಅಗತ್ಯದ ಮೂಲಸೌಕರ್ಯಗಳನ್ನು ನಾಶಗೊಳಿಸಿದ್ದಾರೆ ಮತ್ತು ನೆರವಿನ ಪೂರೈಕೆಗೆ ಅಡ್ಡಿಮಾಡಿದ್ದಾರೆ. ಸುಮಾರು 8 ತಿಂಗಳಿಂದ ನಡೆಯುತ್ತಿರುವ ಸಂಷರ್ಘದಲ್ಲಿ ಕನಿಷ್ಟ 12,190 ಜನರ ಹತ್ಯೆಯಾಗಿದ್ದು 6.6 ದಶಲಕ್ಷಕ್ಕೂ ಅಧಿಕ ಮಂದಿ ನೆಲೆ ಕಳೆದುಕೊಂಡಿದ್ದಾರೆ ಎಂದು ಸಂಸ್ಥೆಯ ವರದಿ ಹೇಳಿದೆ.
ಈ ಮಧ್ಯೆ, ಸುಡಾನ್‍ನ ಸಶಸ್ತ್ರ ಪಡೆ ಹಾಗೂ ಅರೆಸೇನಾ ಪಡೆ ಎರಡೂ ಯುದ್ಧಾಪರಾಧ ಎಸಗಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ. ಕೆಲವು ಸಮುದಾಯಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಹೆಚ್ಚಿದೆ. ಪಶ್ಚಿಮ ಸುಡಾನ್‍ನ ಮಸಲಿತ್ ಜನಾಂಗದವರನ್ನು ಹುಡುಕಿ ಹಲ್ಲೆ ನಡೆಸಲಾಗುತ್ತಿದ್ದು ರಸ್ತೆಯಲ್ಲಿ ಅನಾಥರಂತೆ ಸಾಯುತ್ತಿದ್ದಾರೆ. ಅವರ ಮನೆಗಳಿಗೆ ಬೆಂಕಿಹಚ್ಚಲಾಗುತ್ತಿದ್ದು ಸುಡಾನ್‍ನಲ್ಲಿ ನಿಮಗೆ ಜಾಗವಿಲ್ಲ ಎಂದು ಬೆದರಿಸಲಾಗುತ್ತಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.