ಪಾಕಿಸ್ತಾನದಿಂದ ಬಾಂಗ್ಲಾಕ್ಕೆ ಮೊದಲ ನೇರ ಸರಕು ಸಾಗಣೆ
ಢಾಕ : ಪಾಕಿಸ್ತಾನದ ಮೊದಲ ನೇರ ಸರಕು ಹಡಗು ಕಳೆದ ವಾರ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ಆಗಮಿಸಿದೆ ಎಂದು ಚಿತ್ತಗಾಂಗ್ ಬಂದರು ಪ್ರಾಧಿಕಾರ ಹೇಳಿದೆ. ಬಾಂಗ್ಲಾದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರಕಾರದ ಅಡಿಯಲ್ಲಿ ವಿದೇಶಿ ಸಂಬಂಧಗಳಲ್ಲಿ ಬದಲಾವಣೆಯನ್ನು ಇದು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
1971ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಇದು ಮೊದಲ ನೇರ ಸರಕು ಸಾಗಣೆಯಾಗಿದೆ. ಕರಾಚಿ ಬಂದರಿನಿಂದ ನಮ್ಮ ಜವಳಿ ಮತ್ತು ಸೆರಾಮಿಕ್ ಕೈಗಾರಿಕೆಗಳಿಗೆ ಕಚ್ಛಾವಸ್ತುಗಳನ್ನು ಸಾಗಿಸಲಾಗಿದೆ ಎಂದು ಚಿತ್ತಗಾಂಗ್ ಬಂದರು ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ. 1971ರಲ್ಲಿ ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಯುದ್ಧ ನಡೆದು ಪೂರ್ವ ಪಾಕಿಸ್ತಾನವು ಬಾಂಗ್ಲಾದೇಶ ಎಂಬ ಹೆಸರಿನಲ್ಲಿ ಸ್ವತಂತ್ರ ದೇಶವಾಗಿದೆ. ಇದುವರೆಗೆ ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸರಕುಗಳನ್ನು ಶ್ರೀಲಂಕಾ, ಸಿಂಗಾಪುರ ಅಥವಾ ಮಲೇಶ್ಯಾದಂತಹ ಮೂರನೇ ದೇಶದ ಮೂಲಕ ಹಡಗಿನಲ್ಲಿ ಸಾಗಿಸಲಾಗುತ್ತಿತ್ತು.
ನೇರ ಸರಕು ಸಾಗಣೆಯು ಸಾಗಣೆ ವೆಚ್ಚ ಮತ್ತು ಸಮಯವನ್ನು ಕಡಿಮೆಗೊಳಿಸುತ್ತದೆ. ಇದು ಪ್ರದೇಶದಾದ್ಯಂತ ಹೆಚ್ಚು ಸಂಯೋಜಿತ ವ್ಯಾಪಾರ ಜಾಲಗಳನ್ನು ಹೆಚ್ಚಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಹ್ಮದ್ ಮರೂಫ್ ಹೇಳಿದ್ದಾರೆ.