ಆಸ್ಟ್ರೇಲಿಯಾದಲ್ಲಿ ಪ್ರವಾಹ ; ಭಾರತೀಯ ಪ್ರಜೆ ಮೃತ್ಯು

Update: 2024-02-16 17:34 GMT

ಸಾಂದರ್ಭಿಕ ಚಿತ್ರ (PTI)

ಸಿಡ್ನಿ: ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್ ರಾಜ್ಯದಲ್ಲಿ ನಿರಂತರ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿದ್ದು ಮೌಂಟ್ ಇಸಾ ನಗರದ ಬಳಿ ಪ್ರವಾಹದ ನೀರಿನಲ್ಲಿ ಭಾರತೀಯ ಪ್ರಜೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಕ್ಯಾನ್‍ಬೆರಾದಲ್ಲಿನ ಭಾರತದ ಹೈಕಮಿಷನ್ ಹೇಳಿದೆ.

ಭಾರತದ ಮಹಿಳೆಯೊಬ್ಬರು ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದು ಮೃತರ ಕುಟುಂಬದವರಿಗೆ ತೀವ್ರ ಸಂತಾಪ ಸೂಚಿಸುತ್ತಿದ್ದೇವೆ. ಮೃತ ಮಹಿಳೆಯ ಕುಟುಂಬದವರೊಂದಿಗೆ ಸತತ ಸಂಪರ್ಕದಲ್ಲಿದ್ದು ಅಗತ್ಯ ನೆರವು ಒದಗಿಸಲಾಗುತ್ತಿದೆ ಎಂದು ಭಾರತದ ಹೈಕಮಿಷನ್ `ಎಕ್ಸ್'(ಟ್ವೀಟ್) ಮಾಡಿದೆ. ಮಹಿಳೆಯ ಹೆಸರು, ವರ್ಷ ಇತ್ಯಾದಿ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಒದಗಿಸಿಲ್ಲ. ಇದೇ ಪ್ರದೇಶದಲ್ಲಿ ನಡೆದ ಮತ್ತೊಂದು ದುರಂತದಲ್ಲಿ ಮಾಲ್ಬನ್ ನದಿಯಲ್ಲಿ ಪ್ರವಾಹದಿಂದಾಗಿ ನದಿ ನೀರು ಉಕ್ಕೇರಿ ಹರಿದಿದ್ದು ಕ್ಲಾನ್‍ಕರಿ ಡಚೆಸ್ ರಸ್ತೆಯಲ್ಲಿ ಸಾಗುತ್ತಿದ್ದ ವಾಹನವೊಂದು ನದಿಗೆ ಉರುಳಿದೆ. ವಾಹನ ಚಲಾಯಿಸುತ್ತಿದ್ದ 28 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಕ್ವೀನ್ಸ್‍ಲ್ಯಾಂಡ್ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News