ಇಂಡೊನೇಶ್ಯಾದಲ್ಲಿ ಪ್ರವಾಹ : 13 ಸಾವು; 10 ಮನೆಗಳಿಗೆ ಹಾನಿ
Update: 2024-08-25 15:11 GMT
ಜಕಾರ್ತ : ಇಂಡೊನೇಶ್ಯಾದಲ್ಲಿ ಶನಿವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಉತ್ತರ ಮಲುಕು ಪ್ರಾಂತದಲ್ಲಿ ಕನಿಷ್ಟ 13 ಮಂದಿ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡಿದ್ದಾರೆ.
ಟರ್ನೇಟ್ ನಗರದಲ್ಲಿ 10ಕ್ಕೂ ಅಧಿಕ ಮನೆಗಳು ಹಾನಿಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಹಲವೆಡೆ ಭೂಕುಸಿತ ಸಂಭವಿಸಿದ್ದು ಕೆಸರು ಮಿಶ್ರಿತ ನೀರು ರಸ್ತೆಗಳು ಹಾಗೂ ಕೃಷಿ ಭೂಮಿಗೆ ನುಗ್ಗಿ ಅಪಾರ ಹಾನಿಯಾಗಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಲಾವೃತಗೊಂಡಿರುವ ಪ್ರದೇಶದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹಲವರು ನಾಪತ್ತೆಯಾಗಿರುವ ವರದಿಯಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮುಂದಿನ ಕೆಲ ದಿನ ಮಳೆ ಮುಂದುವರಿಯುವ ಸೂಚನೆಯಿದ್ದು ಜನ ಗರಿಷ್ಠ ಎಚ್ಚರಿಕೆ ವಹಿಸಬೇಕು ಎಂದು ವಿಪತ್ತು ನಿರ್ವಹಣಾ ಏಜೆನ್ಸಿಯ ಅಧಿಕಾರಿಗಳು ಹೇಳಿದ್ದಾರೆ.