ಗಾಝಾ : ನೆರವಿಗಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ಪಡೆಯ ದಾಳಿ

Update: 2024-02-29 15:47 GMT

Photo ceadit : X \ @Timesofgaza

ಗಾಝಾ: ಗಾಝಾ ನಗರದ ಬಳಿ ನೆರವಿಗಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ಪಡೆ ನಡೆಸಿದ ಶೆಲ್ ದಾಳಿಯಲ್ಲಿ ಕನಿಷ್ಟ 104 ಫೆಲೆಸ್ತೀನೀಯರು ಮೃತಪಟ್ಟಿದ್ದು ಇತರ 280 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯಾಧಿಕಾರಿಗಳು ಗುರುವಾರ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಇಸ್ರೇಲ್ ಪಡೆ ಶೆಲ್ ದಾಳಿ ನಡೆಸಿರುವ ಮಾಹಿತಿಯಿಲ್ಲ. ಆದರೆ ನೆರವು ಹೊತ್ತ ಟ್ರಕ್ಗಳು ಉತ್ತರ ಗಾಝಾಕ್ಕೆ ಆಗಮಿಸಿದಾಗ ತಳ್ಳಾಟ, ನೂಕಾಟ ಮತ್ತು ಕಾಲ್ತುಳಿತದಲ್ಲಿ ಹಲವು ಮಂದಿ ಗಾಯಗೊಂಡಿರುವುದಾಗಿ ಇಸ್ರೇಲ್ ಮಿಲಿಟರಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಆಹಾರಕ್ಕಾಗಿ ಕಾಯುತ್ತಿದ್ದ ಗುಂಪಿನಲ್ಲಿದ್ದ ಕೆಲವರು ಇಸ್ರೇಲ್ ಪಡೆಯನ್ನು ಬೆದರಿಸಲು ಮುಂದಾದಾಗ ಸೇನೆ ಅವರತ್ತ ಗುಂಡು ಹಾರಿಸಿದೆ ಎಂದು ಮತ್ತೊಂದು ಮೂಲ ಹೇಳಿದೆ. `ನಬುಲ್ಸಿ ವೃತ್ತದಲ್ಲಿ ಆಹಾರದ ಟ್ರಕ್ಗಳಿಗಾಗಿ ಕಾಯುತ್ತಿದ್ದ ಜನರ ವಿರುದ್ಧ ಇಂದು ಬೆಳಿಗ್ಗೆ ಇಸ್ರೇಲಿ ಆಕ್ರಮಣ ಸೇನೆ ನಡೆಸಿದ ಕೊಳಕು ಹತ್ಯಾಕಾಂಡ ಖಂಡನೀಯ' ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಅವರ ಕಚೇರಿ ಹೇಳಿದೆ.

ಉತ್ತರ ಗಾಝಾಪಟ್ಟಿಯ ಗಾಝಾ ನಗರದ ನಬುಲ್ಸಿ ವೃತ್ತದಲ್ಲಿ ಘಟನೆ ನಡೆದಿದೆ. ಗಾಯಗೊಂಡ ಹಲವರನ್ನು ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಾಝಾದ ಆರೋಗ್ಯ ಇಲಾಖೆಯ ವಕ್ತಾರ ಅಶ್ರಫ್ ಅಲ್-ಖಿದ್ರಾ ಹೇಳಿದ್ದಾರೆ. ಗಾಝಾ ಪಟ್ಟಿಯ ಕಮಲ್ ಅದ್ವನ್ ಆಸ್ಪತ್ರೆಗೆ 10 ಮೃತದೇಹಗಳನ್ನು ಮತ್ತು 15ಕ್ಕೂ ಅಧಿಕ ಗಾಯಾಳುಗಳನ್ನು ಸಾಗಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಯ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆ ಈ ಘಟನೆಯಿಂದಾಗಿ ವಿಫಲವಾಗಬಹುದು. ಮಾತುಕತೆ ವಿಫಲವಾದರೆ ಅದಕ್ಕೆ ಇಸ್ರೇಲ್ ಹೊಣೆಯಾಗಲಿದೆ ಎಂದು ಹಮಾಸ್ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News