ಇಂಡೋನೇಶ್ಯಾದಲ್ಲಿ ಚಿನ್ನದ ಗಣಿ ಕುಸಿತ | 11 ಮಂದಿ ಮೃತ್ಯು ; 19 ಮಂದಿ ನಾಪತ್ತೆ
ಜಕಾರ್ತ: ಇಂಡೋನೇಶ್ಯಾದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತದಿಂದ ಅಕ್ರಮ ಚಿನ್ನದ ಗಣಿಯಲ್ಲಿದ್ದ ಕನಿಷ್ಠ 11 ಗ್ರಾಮಸ್ಥರು ಮೃತಪಟ್ಟಿದ್ದು ಇತರ 19 ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಗೊರೊಂಟಾಲೊ ಪ್ರಾಂತದ ಬೊನೆ ಬೊಲಾಂಗೊ ಜಿಲ್ಲೆಯಲ್ಲಿನ ಅಕ್ರಮ ಚಿನ್ನದ ಗಣಿಯಲ್ಲಿ ಸುಮಾರು 35 ಗ್ರಾಮಸ್ಥರು ಚಿನ್ನವನ್ನು ಶೋಧಿಸುತ್ತಿದ್ದಾಗ ಸುತ್ತಮುತ್ತಲಿನ ಪರ್ವತದಿಂದ ಕಲ್ಲು ಮಿಶ್ರಿತ ಕೆಸರುಮಣ್ಣು ಕುಸಿದು ಗಣಿಯನ್ನು ಮುಚ್ಚಿಹಾಕಿದೆ. ಮಾಹಿತಿ ತಿಳಿದ ರಕ್ಷಣಾ ತಂಡ ಸೋಮವಾರದವರೆಗೆ 11 ಮೃತದೇಹಗಳನ್ನು ಹೊರತೆಗೆದಿದೆ. 5 ಮಂದಿ ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೂ 19 ಮಂದಿ ನಾಪತ್ತೆಯಾಗಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಶೋಧ ಮತ್ತು ರಕ್ಷಣಾ ತಂಡದ ವಕ್ತಾರರು ಹೇಳಿದ್ದಾರೆ.
ಈ ಮಧ್ಯೆ, ಶನಿವಾರದಿಂದ ಮುಂದುವರಿದಿರುವ ಧಾರಾಕಾರ ಮಳೆಯಿಂದ ಅಣೆಕಟ್ಟೆ ಒಡೆದಿದ್ದು ಬೊನೆ ಬೊಲಾಂಗೊ ಪ್ರಾಂತದ 5 ಗ್ರಾಮಗಳು ಸುಮಾರು 3 ಮೀಟರ್ನಳಷ್ಟು ಪ್ರವಾಹ ಉಂಟಾಗಿದೆ. ಸುಮಾರು 300 ಮನೆಗಳು ಜಲಾವೃತಗೊಂಡಿದ್ದು 1000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಿರುವುದಾಗಿ ವರದಿಯಾಗಿದೆ.