ಆಸ್ಟ್ರೇಲಿಯಾದಲ್ಲಿ ಚಿನ್ನದ ಗಣಿ ಕುಸಿದು ಓರ್ವ ಸಾವು ; 29 ಮಂದಿಯ ರಕ್ಷಣೆ

Update: 2024-03-14 17:38 GMT

ಸಾಂದರ್ಭಿಕ ಚಿತ್ರ 

ಸಿಡ್ನಿ: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಚಿನ್ನದ ಗಣಿಯೊಂದು ಕುಸಿದು ಓರ್ವ ಕಾರ್ಮಿಕ ಮೃತಪಟ್ಟಿದ್ದು 29 ಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹಾಗೂ ಉನ್ನತ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಮೆಲ್ಬೋರ್ನ್‍ನ ಸುಮಾರು 100 ಕಿ.ಮೀ ಪಶ್ಚಿಮದಲ್ಲಿರುವ ಬ್ಯಾಲಾರಟ್ ನಗರದ ಚಿನ್ನದ ಗಣಿಯ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಗಣಿಯ ಬದಿಯಲ್ಲಿದ್ದ ಕಲ್ಲು, ಮಣ್ಣು ಕಾರ್ಮಿಕರ ಮೇಲೆಯೇ ಕುಸಿದು ಬಿದ್ದಿದೆ. ದೊಡ್ಡ ಬಂಡೆಯೊಂದರ ಅಡಿ ಸಿಕ್ಕಿಬಿದ್ದಿದ್ದ ಇಬ್ಬರು ಕಾರ್ಮಿಕರಲ್ಲಿ ಒಬ್ಬ ಮೃತಪಟ್ಟಿದ್ದು ಗಂಭೀರ ಗಾಯಗೊಂಡಿದ್ದ ಮತ್ತೊಬ್ಬನನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ 28 ಕಾರ್ಮಿಕರನ್ನು ಸುರಕ್ಷಿತವಾಗಿ ಗಣಿಯೊಳಗಿಂದ ತೆರವುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ದುರಂತವನ್ನು ತಪ್ಪಿಸಬಹುದಿತ್ತು. ಆದರೆ ಅಧಿಕಾರಿಗಳು ಹಣ ಮತ್ತು ಸಮಯ ಉಳಿಸಲು ಅಪಾಯಕಾರಿ ರೀತಿಯ ಕೆಲಸಕ್ಕೆ ಕಾರ್ಮಿಕರನ್ನು ಒಡ್ಡಿದ್ದಾರೆ ಎಂದು ವಿಕ್ಟೋರಿಯಾ ರಾಜ್ಯದ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರೋನಿ ಹೇಡನ್ ಆರೋಪಿಸಿದ್ದಾರೆ. ಇದೀಗ ಚಿನ್ನದ ಗಣಿಯನ್ನು ಮುಚ್ಚಲಾಗಿದ್ದು ಸುರಕ್ಷತಾ ನಿಯಂತ್ರಕರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಬ್ಯಾಲಾರಟ್ ನಗರದ ಮೇಯರ್ ಡೆಸ್ ಹಡ್ಸನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News