ಇಸ್ರೇಲ್ ನತ್ತ ಹಿಜ್ಬುಲ್ಲಾ ಸರಣಿ ಕ್ಷಿಪಣಿ ದಾಳಿ | ಹಿಜ್ಬುಲ್ಲಾ ಗುಪ್ತಚರ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ಪ್ರತಿದಾಳಿ

Update: 2024-10-20 16:13 GMT

PC : NDTV 

ಬೈರುತ್ : ರವಿವಾರ ಲೆಬನಾನ್ನಿಂದ ಸುಮಾರು 100 ಕ್ಷಿಪಣಿಗಳನ್ನು ಇಸ್ರೇಲ್‌ ನತ್ತ ಪ್ರಯೋಗಿಸಿರುವುದಾಗಿ ಹಿಜ್ಬುಲ್ಲಾ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ರವಿವಾರ ಬೆಳಿಗ್ಗೆ ಸೈರನ್ ಮೊಳಗಿದ ಬಳಿಕ 70 ರಾಕೆಟ್‌ ಗಳು ಲೆಬನಾನ್ ಕಡೆಯಿಂದ ನುಗ್ಗಿಬಂದಿವೆ. ಕೆಲ ಗಂಟೆಗಳ ಬಳಿಕ ಮತ್ತೆ 30 ರಾಕೆಟ್‌ ಗಳನ್ನು ಇಸ್ರೇಲ್‌ ನ ಪಶ್ಚಿಮ ಗೈಲೀ ಮತ್ತು ಅಪ್ಪರ್ ಗೈಲೀ ಪ್ರದೇಶದತ್ತ ಪ್ರಯೋಗಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಉತ್ತರ ಇಸ್ರೇಲ್‌ ನ ಸೇಫೆಡ್ ನಗರದ ಪೂರ್ವದಲ್ಲಿ ಇಸ್ರೇಲ್ ಸೇನಾ ನೆಲೆಯನ್ನು ಗುರಿಯಾಗಿಸಿ ಬೃಹತ್ ರಾಕೆಟ್ ದಾಳಿ ನಡೆಸಲಾಗಿದೆ. ಲೆಬನಾನ್‌ ನ ರಕ್ಷಣೆ ಮತ್ತು ಲೆಬನಾನಿನ ಗ್ರಾಮಗಳು ಮತ್ತು ಮನೆಗಳಿಗೆ ಇಸ್ರೇಲ್ ಶತ್ರುವಿನ ದಾಳಿಗೆ ಪ್ರತಿ ದಾಳಿ ಇದಾಗಿದೆ ಎಂದು ಹಿಜ್ಬುಲ್ಲಾ ಹೇಳಿದೆ. ರವಿವಾರ ಬೆಳಿಗ್ಗೆ ದಕ್ಷಿಣ ಬೈರುತ್‌ ನಲ್ಲಿ ಹಿಜ್ಬುಲ್ಲಾ ಭದ್ರಕೋಟೆ ದಾಹಿಯೆಹ್ ನ ಎರಡು ನಗರಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ವರೆದಿಯಾಗಿದೆ.

ಲೆಬನಾನ್ ರಾಜಧಾನಿ ಬೈರುತ್‌ ನಲ್ಲಿ ಹಿಜ್ಬುಲ್ಲಾದ ಗುಪ್ತಚರ ಪ್ರಧಾನ ಕಚೇರಿ ಹಾಗೂ ಭೂಗತ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ ನಿಖರ ದಾಳಿ ನಡೆಸಲಾಗಿದೆ. ದಕ್ಷಿಣ ಲೆಬನಾನ್ ನಲ್ಲಿ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಮೂವರು ಹಿಜ್ಬುಲ್ಲಾ ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.

ಇದಕ್ಕೂ ಮುನ್ನ ದಕ್ಷಿಣ ಬೈರುತ್‌ ನ ಹೊರವಲಯದ ಎರಡು ನಗರಗಳ ನಿವಾಸಿಗಳಿಗೆ ತಕ್ಷಣ ಸ್ಥಳಾಂತರಗೊಳ್ಳುವ ಆದೇಶ ನೀಡಿದೆ. `ಹಿಜ್ಬುಲ್ಲಾಗಳೊಂದಿಗೆ ಸಂಯೋಜಿತವಾಗಿರುವ ವ್ಯವಸ್ಥೆಯ ಬಳಿ ನೀವಿದ್ದೀರಿ. ಮುಂದಿನ ದಿನಗಳಲ್ಲಿ ಈ ಪ್ರದೇಶಗಳ ಮೇಲೆ ದಾಳಿ ನಡೆಯಲಿದೆ. ನಿಮ್ಮ ಮತ್ತು ನಿಮ್ಮ ಕುಟುಂಬದವರ ಸುರಕ್ಷತೆಗಾಗಿ, ತಕ್ಷಣ ಇಲ್ಲಿಂದ ಕನಿಷ್ಠ 500 ಮೀಟರ್ ದೂರಕ್ಕೆ ಸ್ಥಳಾಂತರಗೊಳ್ಳಬೇಕು' ಎಂದು ಸೇನೆ ಸೂಚಿಸಿದೆ. ದಕ್ಷಿಣ ಲೆಬನಾನ್‌ ನ ಹಲವು ಗ್ರಾಮಗಳ ಮೇಲೆ ಶನಿವಾರ ರಾತ್ರಿ ಇಸ್ರೇಲ್ ದಾಳಿ ನಡೆಸಿದ್ದು ವ್ಯಾಪಕ ಸಾವು-ನೋವು ಸಂಭವಿಸಿದೆ ಎಂದು ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ, ದಕ್ಷಿಣ ಲೆಬನಾನ್‌ ನಲ್ಲಿ ಇಸ್ರೇಲ್ ದಾಳಿಯಲ್ಲಿ ಲೆಬನಾನ್‌ ನ ಮೂವರು ಯೋಧರು ಸಾವನ್ನಪ್ಪಿರುವುದಾಗಿ ಲೆಬನಾನ್ ಸೇನೆ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News