ಹಿಜ್ಬುಲ್ಲಾದ ಗುಪ್ತ ಭೂಗತ ಬಂಕರ್ ನಲ್ಲಿ 500 ದಶಲಕ್ಷ ಡಾಲರ್ ನಿಧಿ ಪತ್ತೆ : ಇಸ್ರೇಲ್
ಬೈರುತ್ : ಲೆಬನಾನ್‍ನ ಬೈರುತ್‍ನಲ್ಲಿರುವ ಆಸ್ಪತ್ರೆಯ ಕೆಳಗೆ ಹಿಜ್ಬುಲ್ಲಾದ ಗುಪ್ತ ಭೂಗತ ಬಂಕರ್ ಇರುವುದು ಪತ್ತೆಯಾಗಿದೆ ಎಂದು ಇಸ್ರೇಲ್ ಸೇನೆ ಪ್ರತಿಪಾದಿಸಿದೆ.
ಮಧ್ಯ ಬೈರುತ್‍ನ ಅಲ್-ಸಹೆಲ್ ಆಸ್ಪತ್ರೆಯ ಕೆಳಭಾಗದಲ್ಲಿದ್ದ ಭೂಗತ ಬಂಕರ್‍ನಲ್ಲಿ 500 ದಶಲಕ್ಷ ಡಾಲರ್ ಮೊತ್ತದ ನಗದು ಹಾಗೂ ಚಿನ್ನ ಪತ್ತೆಯಾಗಿದೆ. ಈ ಗುಪ್ತ ಬಂಕರ್ ಹಿಜ್ಬುಲ್ಲಾದ ಆರ್ಥಿಕ ಕೇಂದ್ರವಾಗಿತ್ತು ಎಂದು ನಂಬಿರುವುದಾಗಿ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.
ಬಂಕರ್ ಅನ್ನು ಬೈರುತ್‍ನ ಕೇಂದ್ರಭಾಗದಲ್ಲಿರುವ ಅಲ್-ಸಹೆಲ್ ಆಸ್ಪತ್ರೆಯ ಅಡಿಭಾಗದಲ್ಲಿ ನಿರ್ಮಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ನಡೆಸಿದ ನಿಖರ ದಾಳಿಯಲ್ಲಿ ಬಂಕರ್ ಅನ್ನು ಧ್ವಂಸಗೊಳಿಸಲಾಗಿದ್ದು ಅಪಾರ ಪ್ರಮಾಣದ ನಗದು ಮತ್ತು ಚಿನ್ನ ಪತ್ತೆಯಾಗಿದೆ. ಇಸ್ರೇಲ್‍ನ ಮೇಲಿನ ಹಿಜ್ಬುಲ್ಲಾ ದಾಳಿಗೆ ಹಣಕಾಸು ಒದಗಿಸಲು ಈ ಹಣವನ್ನು ಬಳಸಲಾಗುತ್ತಿತ್ತು. ಈ ಹಣವನ್ನು ಲೆಬನಾನ್ ರಾಷ್ಟ್ರದ ಮರು ನಿರ್ಮಾಣಕ್ಕೆ ಬಳಸಬಹುದಾಗಿದೆ ಎಂದು ಐಡಿಎಫ್ ವಕ್ತಾರ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ.
ಆದರೆ ಇಸ್ರೇಲ್‍ನ ಪ್ರತಿಪಾದನೆಯನ್ನು ಲೆಬನಾನ್ ಸಂಸದ, ಅಲ್-ಸಹೆಲ್ ಆಸ್ಪತ್ರೆಯ ನಿರ್ದೇಶಕ ಫಾದಿ ಅಲಮೆಹ್ ತಳ್ಳಿಹಾಕಿದ್ದಾರೆ. `ಇಸ್ರೇಲ್ ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆ ನೀಡುತ್ತಿದೆ. ಆಸ್ಪತ್ರೆಯು ಶಸ್ತ್ರಚಿಕಿತ್ಸಾ ಕೊಠಡಿಗಳು ಮತ್ತು ಶವಾಗಾರವನ್ನು ಮಾತ್ರ ಹೊಂದಿದೆ. ಬಂಕರ್ ಇತ್ತು ಎಂಬ ಪ್ರತಿಪಾದನೆಯಲ್ಲಿ ಹುರುಳಿಲ್ಲ' ಎಂದಿದ್ದಾರೆ.