ಇಸ್ರೇಲ್‍ನತ್ತ ಮತ್ತೆ ಕ್ಷಿಪಣಿ ಮಳೆಗರೆದ ಹಿಜ್ಬುಲ್ಲಾ
Update: 2024-10-22 16:17 GMT
ಬೈರುತ್ : ಇಸ್ರೇಲ್‍ನ ಟೆಲ್‍ಅವೀವ್ ಹಾಗೂ ಹೈಫಾ ನಗರದ ಪಶ್ಚಿಮದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿ ಮಂಗಳವಾರ ಬೆಳಿಗ್ಗೆ ರಾಕೆಟ್‍ಗಳ ಮಳೆಗರೆದಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
ಕದನ ವಿರಾಮ ಮಾತುಕತೆಯನ್ನು ಪುನರಾರಂಭಿಸಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಇಸ್ರೇಲ್‍ಗೆ ಆಗಮಿಸಿರುವ ಸಂದರ್ಭದಲ್ಲೇ ಹಿಜ್ಬುಲ್ಲಾದ ದಾಳಿ ನಡೆದಿದೆ. ಸೋಮವಾರ ರಾತ್ರಿ ಲೆಬನಾನ್‍ನ ದಕ್ಷಿಣದ ಪ್ರದೇಶ ಹಾಗೂ ರಾಜಧಾನಿ ಬೈರುತ್ ಹಾಗೂ ಅದರ ನೆರೆಹೊರೆಯ ಪಟ್ಟಣಗಳ ಮೇಲೆ ಇಸ್ರೇಲ್ ನಡೆಸಿದ ಭೀಕರ ಬಾಂಬ್ ದಾಳಿಗೆ ಪ್ರತಿಯಾಗಿ ಮಂಗಳವಾರ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
ಇಸ್ರೇಲ್‍ನ ಮಿಲಿಟರಿ ಗುಪ್ತಚರ ಏಜೆನ್ಸಿಯ 8200 ತುಕಡಿ ಬಳಸುವ ಗ್ಲಿಲೋಟ್ ನೆಲೆ ಹಾಗೂ ಟೆಲ್‍ಅವೀವ್‍ನ ಹೊರವಲಯದ ನಿರಿಟ್ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆದಿದೆ. ಬಂದರು ನಗರ ಹೈಫಾದ ಹೊರವಲಯದಲ್ಲಿರುವ ನೌಕಾ ನೆಲೆಯ ಮೇಲೆಯೂ ದಾಳಿ ನಡೆಸಲಾಗಿದೆ. ಸಾವು-ನೋವಿನ ಮಾಹಿತಿಯಿಲ್ಲ ಎಂದು ಹಿಜ್ಬುಲ್ಲಾ ಹೇಳಿದೆ.