ಹಿಝ್ಬುಲ್ಲಾ ಹಣಕಾಸು ಮುಖ್ಯಸ್ಥ ಹತ್ಯೆ: ಇಸ್ರೇಲ್ ಸೇನೆ

Update: 2024-10-22 02:21 GMT

PC: x.com/ImtiazMadmood

ಲೆಬನಾನ್: ಹಿಝ್ಬುಲ್ಲಾ ಸಂಘಟನೆಯ ಹಣಕಾಸು ಮುಖ್ಯಸ್ಥನನ್ನು ಸಿರಿಯಾ ಮೇಲೆ ನಡೆಸಿದ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಪ್ರಕಟಿಸಿದೆ.

ಈ ಹಿಝ್ಬುಲ್ಲಾ ಕಮಾಂಡರ್ ನ ಹೆಸರನ್ನು ಸೇನೆ ಬಹಿರಂಗಪಡಿಸಿಲ್ಲ. ಆದರೆ ಆತ ಹಿಝ್ಬುಲ್ಲಾ 4400 ಘಟಕದ ಮುಖ್ಯಸ್ಥ ಎಂದು ಸ್ಪಷ್ಟಪಡಿಸಿದೆ. ಈ ಘಟಕ ಟೆಹರಾನ್ ನಿಂದ ಹಿಝ್ಬುಲ್ಲಾಗೆ ಹಣ ವರ್ಗಾವಣೆ ಮಾಡುತ್ತಿತ್ತು ಎಂದು ಹೇಳಿದೆ. ಮುಖ್ಯವಾಗಿ ಇರಾನ್ ಮಾರಾಟ ಮಾಡುವ ತೈಲದಿಂದ ಬರುವ ಹಣವನ್ನು ವರ್ಗಾಯಿಸಲಾಗುತ್ತಿತ್ತು ಎಂದು ಸ್ಪಷ್ಟಪಡಿಸಿದೆ.

ಇಸ್ರೇಲಿ ಸೇನೆಯ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗರಿ ಈ ವಿಷಯವನ್ನು ಬಹಿರಂಗಪಡಿಸಿದ್ದು, 4400 ಘಟಕ, ಹಿಝ್ಬುಲ್ಲಾ ಸಂಘಟನೆಗೆ ಲಕ್ಷಾಂತರ ಡಾಲರ್ ಹಣಕಾಸಿನ ನೆರವನ್ನು ವರ್ಗಾಯಿಸುತ್ತಿತ್ತು ಎಂದು ವಿವರಿಸಿದ್ದಾರೆ.

ಈ ಮಧ್ಯೆ ಅಲ್ ಕ್ವಾರ್ಡ್ ಅಲ್ ಹಸನ್ನಲ್ಲಿ ಹಿಝ್ಬುಲ್ಲಾ ನಿರ್ವಹಿಸುವ ಹಣಕಾಸು ಸಂಸ್ಥೆಗಳ ಮೇಲೆ ಗುರಿ ಮಾಡಿದ ದಾಳಿಯನ್ನು ಮುಂದುವರಿಸುವುದಾಗಿ ಹೇಳಿದೆ. ದಕ್ಷಿಣ ಬೈರೂತ್ ನ ಕನಿಷ್ಠ 15 ಶಾಖೆಗಳ ಮೇಲೆ ದಾಳಿ ನಡೆಸಲಾಗಿದ್ದು, ಬೆಕ್ಕಾ ಕಣಿವೆಯ ಪ್ರದೇಶದಲ್ಲಿ 9 ಮಹಡಿಯ ಕಟ್ಟಡವನ್ನು ಧ್ವಂಸಗೊಳಿಸಿರುವುದಾಗಿ ತಿಳಿಸಿದೆ.

ಕಟ್ಟಡವನ್ನು ತೆರವುಗೊಳಿಸುವಂತೆ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದ್ದು, ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಬೈರೂತ್ ನಗರದ ಆಸ್ಪತ್ರೆಯ ಬಳಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವುದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ. ದಕ್ಷಿಣ ಲೆಬನಾನ್ ನಲ್ಲಿ ಹಿಝ್ಬುಲ್ಲಾದ ಸೇನಾ ಅಸ್ತಿತ್ವವನ್ನು ಮುರಿಯುವ ನಿಟ್ಟಿನಲ್ಲಿ ಇಸ್ರೇಲ್ ಕಾರ್ಯಾಚರಣೆ ನಡೆಸುತ್ತಿದೆ. ಹಿಝ್ಬುಲ್ಲಾ ಕೂಡಾ ಪ್ರತಿದಾಳಿ ನಡೆಸುತ್ತಿದ್ದು, ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುವ ಮೂಲಕ ಹಿಂಸಾಚಕ್ರ ಮುಂದುವರಿದಿದೆ.

ದಕ್ಷಿಣ ಲೆಬನಾನ್ ನಲ್ಲಿ ನಡೆಸಿದ ವಾಯು ದಾಳಿಯಲ್ಲಿ ಪ್ರಮಾದವಶಾತ್ ಮೂವರು ಲೆಬನಾನ್ ಸೈನಿಕರನ್ನು ಹತ್ಯೆ ಮಾಡಿರುವ ಘಟನೆ ಬಗ್ಗೆ ಇಸ್ರೇಲ್ ಕ್ಷಮೆ ಯಾಚಿಸಿದೆ. ಲೆಬನಾನ್ ಸೇನೆಯನ್ನು ತಾನು ಗುರಿ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಹಿಝ್ಬುಲ್ಲಾ ಸಂಘಟನೆಗೆ ಸೇರಿದ ವಾಹನವನ್ನು ಗುರಿ ಮಾಡಿ ದಾಳಿ ನಡೆಸಲಾಗಿತ್ತು ಎಂದು ಸೇನೆ ಸಮುಜಾಯಿಷಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News