ಇಸ್ರೇಲ್‍ನತ್ತ ರಾಕೆಟ್‍ಗಳ ಮಳೆಗರೆದ ಹಿಜ್ಬುಲ್ಲಾ | ಕನಿಷ್ಠ 12 ಮಂದಿಗೆ ಗಾಯ

Update: 2024-10-08 18:10 GMT

PC : PTI

ಬೈರುತ್ : ಇಸ್ರೇಲ್‍ನ ಮೇಲೆ ಸೋಮವಾರ ರಾತ್ರಿ ಹಿಜ್ಬುಲ್ಲಾ ಗುಂಪು ರಾಕೆಟ್ ದಾಳಿ ನಡೆಸಿದ್ದು ಮೂರನೇ ದೊಡ್ಡ ನಗರ ಹೈಫಾದ ಮೇಲೆ ರಾಕೆಟ್‍ಗಳ ಮಳೆಗರೆದಿದೆ ಎಂದು ವರದಿಯಾಗಿದೆ.

ಲೆಬನಾನ್ ಕಡೆಯಿಂದ ಸುಮಾರು 190 ಸ್ಫೋಟಕ ಸಾಧನಗಳು ಇಸ್ರೇಲ್ ಪ್ರದೇಶವನ್ನು ಪ್ರವೇಶಿಸಿವೆ. ಹೈಫಾದ ಮೇಲೆ 85 ರಾಕೆಟ್‍ಗಳನ್ನು ಪ್ರಯೋಗಿಸಲಾಗಿದ್ದು ಇದನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ದಾಳಿ ನಡೆದ ತಕ್ಷಣ ಸೈರನ್ ಮೊಳಗಿಸಲಾಗಿದ್ದು ಜನರು ಬಾಂಬ್‍ನಿಂದ ರಕ್ಷಣೆ ಪಡೆಯುವ ಶಿಬಿರದತ್ತ ಧಾವಿಸಿದರು. ರಾಕೆಟ್‍ಗಳ ಅವಶೇಷ ಬಿದ್ದು ನಗರದ ಕೆಲವೆಡೆ ಹಾನಿ ಸಂಭವಿಸಿದ್ದು ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಮೂಲಗಳು ಹೇಳಿವೆ.

ಇನ್ನಷ್ಟು ದಾಳಿಗಳು ನಡೆಯಲಿವೆ ಎಂದು ಹಿಜ್ಬುಲ್ಲಾದ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಇರಾನ್ ಬೆಂಬಲಿತ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಇಸ್ರೇಲ್‍ನ ವಾಣಿಜ್ಯ ಕೇಂದ್ರ ಟೆಲ್‍ಅವೀವ್ ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿದ್ದು ಗುರಿ ತಲುಪಿದೆ ಎಂದು ಹೌದಿಗಳ ವಕ್ತಾರರು ಪ್ರತಿಪಾದಿಸಿದ್ದಾರೆ.

ಇಸ್ರೇಲ್‍ನ ಮತ್ತಷ್ಟು ಆಳಕ್ಕೆ ಕ್ಷಿಪಣಿ ದಾಳಿ ಮುಂದುವರಿಯಲಿದ್ದು ಇನ್ನಷ್ಟು ಇಸ್ರೇಲಿಯನ್ನರು ಸ್ಥಳಾಂತರಗೊಳಿಸಲಾಗುವುದು ಎಂದು ಹಿಜ್ಬುಲ್ಲಾದ ಮುಖಂಡ ಶೇಖ್ ನಯೀಮ್ ಕಸ್ಸೆಮ್ ಘೋಷಿಸಿದ್ದಾರೆ. ವಾರಗಳಿಂದ ಮುಂದುವರಿದಿರುವ ಇಸ್ರೇಲ್‍ನ ದಾಳಿಗಳ ಹೊರತಾಗಿಯೂ ಹಿಜ್ಬುಲ್ಲಾದ ಸಾಮರ್ಥ್ಯಗಳು ಹಾಗೆಯೇ ಉಳಿದಿವೆ. ನಾವು ನೂರಾರು ರಾಕೆಟ್‍ಗಳು ಹಾಗೂ ಹಲವು ಡ್ರೋನ್‍ಗಳನ್ನು ಪ್ರಯೋಗಿಸಿದ್ದೇವೆ. ಶತ್ರುಗಳ ಹಲವು ನಗರಗಳು ಪ್ರತಿರೋಧ ಪಡೆಯ ದಾಳಿಗೆ ಗುರಿಯಾಗಿವೆ. ನಮ್ಮ ಸಾಮರ್ಥ್ಯ ಕುಸಿದಿಲ್ಲ. ಮುಂಚೂಣಿ ಕ್ಷೇತ್ರದುದ್ದಕ್ಕೂ ನಮ್ಮ ಹೋರಾಟಗಾರರನ್ನು ನಿಯೋಜಿಸಲಾಗಿದೆ. ಹಿಜ್ಬುಲ್ಲಾದ ಉನ್ನತ ನಾಯಕತ್ವ ಯುದ್ಧವನ್ನು ನಿರ್ದೇಶಿಸುತ್ತಿದೆ ಮತ್ತು ಯಾವುದೇ ಖಾಲಿ ಹುದ್ದೆಯಿಲ್ಲ. ಮೃತಪಟ್ಟ ಕಮಾಂಡರ್ ಗಳ ಸ್ಥಾನದಲ್ಲಿ ಬೇರೆಯವರನ್ನು ನೇಮಿಸಲಾಗುತ್ತಿದೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತರಾದ ಹಸನ್ ನಸ್ರಲ್ಲಾ ಉತ್ತರಾಧಿಕಾರಿಯನ್ನು ಶೀಘ್ರವೇ ಹೆಸರಿಸಲಾಗುವುದು ಎಂದವರು ಹೇಳಿದ್ದಾರೆ.

ಈ ಮಧ್ಯೆ, ಇರಾನ್‍ನ ಇಸ್ಫಹಾನ್ ನಗರದ ಬಳಿ ಮಂಗಳವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ ಇದನ್ನು ಇರಾನ್‍ನ ಅಧಿಕಾರಿಗಳು ನಿರಾಕರಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News