ಲೆಬನಾನ್: ಇಸ್ರೇಲ್ ವೈಮಾನಿಕ ದಾಳಿಗೆ ಹಿಜ್ಬುಲ್ಲಾ ಕ್ಷಿಪಣಿ ವಿಭಾಗದ ಮುಖ್ಯಸ್ಥ ಬಲಿ, ಮೃತರ ಸಂಖ್ಯೆ 569ಕ್ಕೆ ಏರಿಕೆ
ಲೆಬನಾನ್: ಲೆಬನಾನ್‌ನಾದ್ಯಂತ ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ ಈವರೆಗೆ ಕನಿಷ್ಠ 569 ಜನರು ಬಲಿಯಾಗಿದ್ದು, ಬೈರುತ್‌ನಲ್ಲಿ ಹಿಜ್ಬುಲ್ಲಾ ಕ್ಷಿಪಣಿ ವಿಭಾಗದ ಮುಖ್ಯಸ್ಥ ಇಬ್ರಾಹಿಂ ಮುಹಮ್ಮದ್ ಖುಬೈಸಿ ಹತರಾಗಿದ್ದಾರೆ ಎಂದು ಹಿಜ್ಬುಲ್ಲಾ ದೃಢಪಡಿಸಿದೆ.
ಲೆಬನಾನ್‌ನ ಆರೋಗ್ಯ ಸಚಿವಾಲಯದ ಪ್ರಕಾರ, ಲೆಬನಾನ್‌ನಾದ್ಯಂತ ಇಸ್ರೇಲ್ ನಡೆಸಿದ ಬಾಂಬ್‌ದಾಳಿಗೆ ಕನಿಷ್ಠ 569 ಜನರು ಬಲಿಯಾಗಿದ್ದಾರೆ. ಸಾವಿರಾರು ಜನರು ದಕ್ಷಿಣ ಲೆಬನಾನ್‌ನಿಂದ ತಮ್ಮ ನಿವಾಸಗಳನ್ನು ಬಿಟ್ಟು ತೆರಳಿದ್ದಾರೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಗುಂಡಿನ ದಾಳಿ ಮುಂದುವರೆದಿದೆ. ಇಸ್ರೇಲ್ ದಾಳಿಗೆ ಪ್ರತಿರೋಧವಾಗಿ ಹಿಜ್ಬುಲ್ಲಾ ಇಸ್ರೇಲ್ ನ ಹೈಫಾ, ಸಫೇದ್ ಮತ್ತು ನಜರೆತ್ ಸೇರಿದಂತೆ ಉತ್ತರ ಇಸ್ರೇಲ್ ನಗರಗಳ ಮೇಲೆ 300 ರಾಕೆಟ್‌ಗಳ ಮೂಲಕ ಪ್ರತಿದಾಳಿಯನ್ನು ನಡೆಸಿದೆ.
ಇಬ್ರಾಹಿಂ ಮುಹಮ್ಮದ್ ಖುಬೈಸಿ 1980ರ ದಶಕದಿಂದ ಹಿಜ್ಬುಲ್ಲಾದಲ್ಲಿ ಸಕ್ರಿಯರಾಗಿದ್ದರು. ಪ್ರಸ್ತುತ ಹಿಜ್ಬುಲ್ಲಾ ಕ್ಷಿಪಣಿ ವಿಭಾಗದ ಮುಖ್ಯಸ್ಥರಾಗಿದ್ದರು.
ಈ ಮಧ್ಯೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.