ಹಮಾಸ್ ದಾಳಿ: ಭೀಕರ ಕದನದಲ್ಲಿ 400ಕ್ಕೂ ಹೆಚ್ಚು ಮಂದಿ ಮೃತ್ಯು

Update: 2023-10-08 08:36 GMT

Photo: PTI

ಗಾಝಾ: ಹಮಾಸ್ ಶನಿವಾರ ನಡೆಸಿದ ಬೃಹತ್ ಪ್ರಮಾಣದ ಮಿಂಚಿನ ದಾಳಿಯ ಬಳಿಕ ಇಸ್ರೇಲ್ ಪ್ರತಿದಾಳಿ ಮುಂದುವರಿಸಿದ್ದು, ಭೀಕರ ಕದನದಲ್ಲಿ 432ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಹಮಾಸ್ ದಾಳಿಯಲ್ಲಿ ಇಸ್ರೇಲ್‍ನಲ್ಲಿ ಕನಿಷ್ಠ 200 ಮಂದಿ ಬಲಿಯಾಗಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಸಂಘರ್ಷದಲ್ಲಿ 232 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಗಾಝಾ ಅಧಿಕಾರಿಗಳು ಪ್ರಕಟಿಸಿದ್ದಾರೆ. ಉಭಯ ಕಡೆಗಳ ನೂರಾರು ಮಂದಿ ಗಾಯಗೊಂಡಿದ್ದಾರೆ.

ಹಮಾಸ್ ದಾಳಿಯನ್ನು ಇರಾನ್ ಬೆಂಬಲಿಸಿದ್ದು, ಈ ದಾಳಿಯಲ್ಲಿ ಇರಾನ್ ನೇರವಾಗಿ ಪಾಲ್ಗೊಂಡಿದೆ ಎಂದು ತಕ್ಷಣಕ್ಕೆ ಹೇಳುವಂತಿಲ್ಲ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.

ಏತನ್ಮಧ್ಯೆ ಅಮೆರಿಕ ಮತ್ತು ಇಸ್ರೇಲ್ ನಡುವೆ ಮಿಲಿಟರಿ ನೆರವಿನ ಸಂಬಂಧ ಚರ್ಚೆ ಮುಂದುವರಿದಿದೆ ಎಂದು ಶ್ವೇತಭವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಗಾಝಾ ಸಂಘರ್ಷ ಹರಡದಂತೆ ತಡೆಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಇತರ ದೇಶಗಳ ಜತೆ ಚರ್ಚಿಸಿ ಕೈಗೊಳ್ಳಲಾಗುತ್ತಿದೆ ಎಂದು ಅಮೆರಿಕದ ಬೈಡನ್ ಆಡಳಿತದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹಮಾಸ್‍ನ ದಿಢೀರ್ ದಾಳಿಯ ಬಳಿಕ ಇಸ್ರೇಲ್‍ನಲ್ಲಿ ಪರಿಸ್ಥಿತಿ ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ. ದಕ್ಷಿಣ ಇಸ್ರೇಲ್‍ನಲ್ಲಿ ಕಾಳಗ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News