ಗಾಝಾದಲ್ಲಿ ನೆರವು ಕಾರ್ಯಕರ್ತರ ಹತ್ಯೆ ಪ್ರಕರಣ | ಕ್ಷಮೆ ಯಾಚಿಸಿದ ಇಸ್ರೇಲ್ ಪಡೆ
Update: 2024-04-03 15:37 GMT
ಟೆಲ್‍ಅವೀವ್: ಗಾಝಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ನೆರವು ಕಾರ್ಯಕರ್ತರು ಸಾವನ್ನಪ್ಪಿರುವ ಬಗ್ಗೆ ಕ್ಷಮೆ ಯಾಚಿಸುವುದಾಗಿ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿದೆ.
ದಾಳಿಯ ಬಗ್ಗೆ ಅಂತರಾಷ್ಟ್ರೀಯ ಮುಖಂಡರ ಖಂಡನೆ ಮತ್ತು ಅಮೆರಿಕ ಹಾಗೂ ಬ್ರಿಟನ್‍ನಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಐಡಿಎಫ್ ಈ ಕ್ರಮ ಕೈಗೊಂಡಿದೆ. `ನೆರವು ಕಾರ್ಯಕರ್ತರ ಮೇಲೆ ನಡೆದ ದಾಳಿ ಬಹುದೊಡ್ಡ ಪ್ರಮಾದವಾಗಿದೆ. ಇದು ನಡೆಯಬಾರದಿತ್ತು. ತಪ್ಪಾಗಿ ಗುರುತಿಸುವಿಕೆ ಈ ಪ್ರಮಾದಕ್ಕೆ ಕಾರಣವಾಗಿದ್ದು ನೆರವು ವಿತರಣೆ ಕಾರ್ಯಕರ್ತರಿಗೆ ಉದ್ದೇಶಪೂರ್ವಕವಲ್ಲದ ಹಾನಿಗಾಗಿ ವಿಷಾದಿಸುತ್ತೇವೆ' ಎಂದು ಐಡಿಎಫ್ ಮುಖ್ಯಸ್ಥ ಹೆರ್ಝಿ ಹಲೇವಿ ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ, ನೆರವು ಕಾರ್ಯಕರ್ತರ ಮೇಲಿನ ದಾಳಿಯ ಬಗ್ಗೆ ಅಮೆರಿಕ ಅಧ್ಯಕ್ಷ ಬೈಡನ್ , ಬ್ರಿಟನ್ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯಾ ಪ್ರಧಾನಿ ಅಂತೋನಿ ಅಲ್ಬಾನಿಸ್ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯ ಇಸ್ರೇಲ್ ಸರಕಾರವನ್ನು ತರಾಟೆಗೆತ್ತಿಕೊಂಡಿದೆ.