ಅಕ್ಕಿ ರಫ್ತಿಗೆ ಭಾರತದ ನಿರ್ಬಂಧ; ಅಕ್ಕಿ ದಾಸ್ತಾನಿಗೆ ಮಲೇಶಿಯನ್ನರ ಧಾವಂತ
ಕೌಲಲಾಂಪುರ: ಅಕ್ಕಿಯ ರಫ್ತನ್ನು ನಿಷೇಧಿಸುವ ಭಾರತ ಸರಕಾರದ ನಿರ್ಧಾರದಿಂದ ಮಲೇಶ್ಯಾದಲ್ಲಿ ಅಕ್ಕಿಬೆಲೆ ಗಗನಕ್ಕೇರಿದೆ. ಇದರ ಜತೆಗೆ, ಅಕ್ಕಿಯ ಕೊರತೆಯ ಭಯದಿಂದ ಗ್ರಾಹಕರು ಅಕ್ಕಿಯನ್ನು ದಾಸ್ತಾನು ಇಟ್ಟುಕೊಳ್ಳಲು ಮುಗಿಬೀಳುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಎದುರಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ಅರಬ್ ನ್ಯೂಸ್' ವರದಿ ಮಾಡಿದೆ.
ವಿಶ್ವದಲ್ಲಿ ಅತ್ಯಧಿಕ ರಫ್ತು ಮಾಡುವ ದೇಶವಾಗಿರುವ ಭಾರತವು ಅಕ್ಕಿರಫ್ತಿನ ಮೇಲೆ ಜುಲೈಯಲ್ಲಿ ನಿರ್ಬಂಧ ವಿಧಿಸಿದೆ. ಇದು ಜಾಗತಿಕ ಅಕ್ಕಿ ಬಳಕೆಯ 90%ದಷ್ಟು ಪ್ರಮಾಣವನ್ನು ಹೊಂದಿರುವ ಏಶ್ಯಾದಲ್ಲಿ ಪೂರೈಕೆ ಕೊರತೆ ಹಾಗೂ ಬೆಲೆ ಏರಿಕೆಯ ಆತಂಕವನ್ನು ಸೃಷ್ಟಿಸಿದೆ. 32 ದಶಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಮಲೇಶ್ಯಾ ದೇಶಕ್ಕೆ ಅಗತ್ಯವಿರುವ ಅಕ್ಕಿಯ ಮೂರನೇ ಒಂದರಷ್ಟು ಪ್ರಮಾಣ ವಿದೇಶದಿಂದ ಆಮದಾಗುತ್ತಿದೆ. ಕಳೆದ ತಿಂಗಳು ಆಮದಾಗುವ ಬೆಳ್ತಿಗೆ ಅಕ್ಕಿಯ ಚಿಲ್ಲರೆ ದರ 30%ದಷ್ಟು ಹೆಚ್ಚಿರುವುದರಿಂದ ಆತಂಕಗೊಂಡಿರುವ ಜನತೆ ಅಕ್ಕಿದಾಸ್ತಾನು ಮಾಡಿಕೊಳ್ಳಲು ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಸ್ಥಳೀಯ ಅಕ್ಕಿ ದಾಸ್ತಾನು ಮುಗಿದಿರುವುದರಿಂದ ಅಧಿಕ ದರದ ಆಮದು ಅಕ್ಕಿಯನ್ನು ಖರೀದಿಸುವ ಅನಿವಾರ್ಯತೆ ಎದುರಾಗಿದೆ.
ಭಾರತದ ರಫ್ತು ನಿಷೇಧ ಆಘಾತವು ಮಲೇಶ್ಯಾವನ್ನು ಅಕ್ಕಿ ಕೊರತೆ ಮತ್ತು ಬೆಲೆಹೆಚ್ಚಳದ ಬಿಕ್ಕಟ್ಟಿನಲ್ಲಿ ಮುಳುಗಿಸಿದೆ. ಮಲೇಶ್ಯಾವು ಹೆಚ್ಚಿನ ಉತ್ಪಾದಕತೆ ಮತ್ತು ಉತ್ಪಾದನೆ ಹಾಗೂ ಹೆಚ್ಚು ಸ್ಪರ್ಧಾತ್ಮಕ ಉದ್ಯಮದ ಮೂಲಕ ಅಕ್ಕಿಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಥವಾದರೆ ಈ ಬಿಕ್ಕಟ್ಟಿನಿಂದ ಪಾರಾಗಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದೀಗ ಆಸಿಯಾನ್(ಆಗ್ನೇಯ ಏಶ್ಯಾ ರಾಷ್ಟ್ರಗಳ ಸಂಘಟನೆ) ಸದಸ್ಯ ದೇಶಗಳಾದ ಥೈಲ್ಯಾಂಡ್, ವಿಯೆಟ್ನಾಮ್ ಮತ್ತಿತರ ದೇಶಗಳಿಂದ ಅಕ್ಕಿ ಆಮದಿಗೆ ಪ್ರಯತ್ನಿಸಲಾಗುವುದು ಎಂದು ಮಲೇಶ್ಯಾ ಸರಕಾರ ಹೇಳಿದೆ.
ಅಕ್ಕಿ ದಾಸ್ತಾನು ಮಾಡಿದರೆ ಕ್ರಮ: ಪ್ರಧಾನಿ ಎಚ್ಚರಿಕೆ
ಸ್ಥಳೀಯ ಪೂರೈಕೆ ಸರಪಳಿಗಳನ್ನು ಪರಿಶೀಲಿಸಲು ಕಾರ್ಯಪಡೆ ಸೇರಿದಂತೆ ಗಗನಕ್ಕೇರಿರುವ ಅಕ್ಕಿಬೆಲೆಯನ್ನು ಕಡಿಮೆ ಮಾಡಲು ಮಲೇಶ್ಯಾ ಸರಕಾರ ಈ ವಾರ ಸಬ್ಸಿಡಿ ಹಾಗೂ ಇತರ ಕ್ರಮಗಳನ್ನು ಜಾರಿಗೊಳಿಸಿದೆ. ಭಾರೀ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಣೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಅನ್ವರ್ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.
ಸಾಕಷ್ಟು ಅಕ್ಕಿ ಲಭ್ಯವಿದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ. ದೇಶದಲ್ಲಿ ಅಕ್ಕಿಯ ಕೊರತೆಯಿಲ್ಲ. ಜನತೆ ಗಾಭರಿಯಿಂದ ಅಕ್ಕಿ ಖರೀದಿಗೆ ಮುಗಿಬೀಳಬಾರದು ಎಂದು ಕೃಷಿ ಮತ್ತು ಆಹಾರ ಭದ್ರತಾ ಸಚಿವ ಮುಹಮ್ಮದ್ ಸಾಬು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.