ನಿಜ್ಜರ್ ಹತ್ಯೆ ಪ್ರಕರಣದ ತನಿಖೆಗೆ ಕೆನಡಾದೊಂದಿಗೆ ಭಾರತ ಸಹಕರಿಸುತ್ತಿಲ್ಲ: ಅಮೆರಿಕ ಆರೋಪ
ವಾಷಿಂಗ್ಟನ್: ಕಳೆದ ವರ್ಷ ನಡೆದ ಸಿಖ್ ಪ್ರತ್ಯೇಕತಾವಾದಿ ಹತ್ಯೆ ಪ್ರಕರಣದ ತನಿಖೆಗೆ ಕೆನಡಾದೊಂದಿಗೆ ಭಾರತ ಸಹಕರಿಸುತ್ತಿಲ್ಲ ಎಂದು ಅಮೆರಿಕ ಮಂಗಳವಾರ ಆರೋಪಿಸಿದೆ.
"ಕೆನಡಾದ ಆರೋಪಗಳು ಅತ್ಯಂತ ಗಂಭೀರವಾಗಿದೆ. ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಭಾರತ ಸರ್ಕಾರ ಕೆನಡಾದೊಂದಿಗೆ ತನಿಖೆಗೆ ಸಹಕರಿಸಬೇಕು. ಆದರೆ ಭಾರತ ಆ ನಿಟ್ಟಿನಲ್ಲಿ ಮುಂದುವರಿಯುತ್ತಿಲ್ಲ”, ಎಂದು ಅಮೆರಿಕ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಜೂನ್‌ನಲ್ಲಿ ಸರ್ರೆಯಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟ್ ಗಳು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು.
ಆರೋಪಗಳನ್ನು ತಿರಸ್ಕರಿಸಿದ ಭಾರತವು ಕೆನಡಾದಿಂದ ತನ್ನ ಹೈಕಮಿಷನರ್ ಅವರನ್ನು ಹಿಂದಕ್ಕೆ ಕರೆಸಿಕೊಂಡಿದ್ದು ಮಾತ್ರವಲ್ಲದೆ ತನ್ನ ಆರು ಕೆನಡಾ ರಾಜತಾಂತ್ರಿಕರನ್ನು ದೇಶ ತೊರೆಯುವಂತೆ ಹೇಳಿದೆ.