ಕೆನಡಾ ವ್ಯಾಪಾರ ನಿಯೋಗದ ಭಾರತ ಭೇಟಿ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ
ಒಟ್ಟಾವ : ಅಕ್ಟೋಬರ್ ನಲ್ಲಿ ನಿಗದಿಯಾಗಿದ್ದ ಕೆನಡಾದ ಉನ್ನತ ಮಟ್ಟದ ವ್ಯಾಪಾರ ನಿಯೋಗದ ಭಾರತ ಭೇಟಿಯನ್ನು ಕೆನಡಾ ಸರಕಾರ ಅನಿರ್ಧಿಷ್ಟವಾಗಿ ಮುಂದೂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಜತೆಗಿನ ‘ಅರ್ಲಿ ಪ್ರೋಗ್ರೆಸ್ ಟ್ರೇಡ್ ಅಗ್ರಿಮೆಂಟ್(ಇಪಿಟಿಎ)ಗೆ ಆಗಸ್ಟ್ ನಲ್ಲಿ ಕೆನಡಾ ಸರಕಾರ ತಾತ್ಕಾಲಿಕ ತಡೆ ವಿಧಿಸಿತ್ತು. ಆದರೆ ಅಂತರಾಷ್ಟ್ರೀಯ ವ್ಯಾಪಾರ, ರಫ್ತು ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ ಸಚಿವೆ ಮೇರಿ ಎನ್ ಗಿ ನೇತೃತ್ವದ ಐದು ಸದಸ್ಯರ ವ್ಯಾಪಾರ ನಿಯೋಗವು ಅಕ್ಟೋಬರ್ 9ರಂದು ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲಿದೆ ಎಂದು ಸರಕಾರ ಹೇಳಿತ್ತು. ಭಾರತದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಈ ವರ್ಷದ ಮೇ ತಿಂಗಳಿನಲ್ಲಿ ಕೆನಡಾಕ್ಕೆ ಭೇಟಿ ನೀಡಿದ ಸಂದರ್ಭ ವ್ಯಾಪಾರ ನಿಯೋಗದ ಭಾರತದ ಭೇಟಿಯನ್ನು ಘೋಷಿಸಲಾಗಿತ್ತು.
ಆದರೆ ಈ ಕಾರ್ಯಕ್ರಮವನ್ನು ಮುಂದೂಡಿರುವ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದ್ದು ಕಾರಣ ನೀಡಿಲ್ಲ ಎಂದು ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಭಾರತದ ಅಧಿಕಾರಿಯೊಬ್ಬರು ‘ಕೆನಡಾದ ಭೂಪ್ರದೇಶದಲ್ಲಿ ಭಾರತದ ವಿರುದ್ಧ ವಿಧ್ವಂಸಕ ಚಟುವಟಿಕೆಗಳಿಗೆ ಅನುಮತಿಸುವವರೆಗೆ ಕೆನಡಾದೊಂದಿಗೆ ವ್ಯಾಪಾರ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದಿದ್ದರು.
ಕೆನಡಾದಲ್ಲಿ ಹೆಚ್ಚುತ್ತಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ತಂಡದ ಚಟುವಟಿಕೆಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಹೆಚ್ಚಿದ್ದು, ಹೊಸದಿಲ್ಲಿಯಲ್ಲಿ ನಡೆದಿದ್ದ ಜಿ20 ಶೃಂಗಸಭೆಯಲ್ಲಿ ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಭಾರತದ ಕಳವಳವನ್ನು ಪ್ರಧಾನಿ ನರೇಂದ್ರ ಮೋದಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಜತೆ ವ್ಯಕ್ತಪಡಿಸಿದ್ದರು.
ಕೆನಡಾ ವ್ಯಾಪಾರ ನಿಯೋಗದ ಭಾರತದ ಭೇಟಿ ಮುಂದೂಡಲ್ಪಟ್ಟಿರುವ ವರದಿಗೆ ಪ್ರತಿಕ್ರಿಯಿಸಿರುವ ಕೆನಡಾ ವ್ಯಾಪಾರ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಗೋಲ್ಡಿ ಹೈದರ್ ‘ಉಭಯ ದೇಶಗಳು ಬಲವಾದ ಇತಿಹಾಸ ಮತ್ತು ಉಜ್ವಲ ಭವಿಷ್ಯದೊಂದಿಗೆ ಆಳವಾಗಿ ಬೇರೂರಿರುವ ಮತ್ತು ಪರಸ್ಪರ ಲಾಭದಾಯಕ ಆರ್ಥಿಕ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತವೆ. ಕಾಲಕಾಲಕ್ಕೆ ಸಂಭವಿಸಬಹುದಾದ ರಾಜಕೀಯ ಉದ್ವಿಗ್ನತೆಯನ್ನು ಲೆಕ್ಕಿಸದೆ ಈ ಸಂಬಂಧ ಮುಂದುವರಿಯುವ ವಿಶ್ವಾಸವಿದೆ’ ಎಂದಿದ್ದಾರೆ.