ಪ್ರೇಯಸಿಯನ್ನು ಹೊಡೆದು ಸಾಯಿಸಿದ ಭಾರತ ಮೂಲದ ವ್ಯಕ್ತಿಗೆ 20 ವರ್ಷ ಜೈಲು
ಸಿಂಗಾಪುರ: ಪರ ಪುರುಷನ ಜತೆ ಸಂಬಂಧ ಹೊಂದಿದ್ದ ಶಂಕೆಯಿಂದ ಪ್ರೇಯಸಿಯನ್ನು ಹೊಡೆದು ಸಾಯಿಸಿದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಇಲ್ಲಿನ ಕೋರ್ಟ್ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ವಾಸ್ತವವಾಗಿ ನೈಜ ಹತ್ಯೆ ಪ್ರಕರಣವಾಗಿರದೇ ಪ್ರಮಾದವಶಾತ್ ಹತ್ಯೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಬೇರೆ ವ್ಯಕ್ತಿಯ ಜತೆ ಪ್ರೇಯಸಿ ಮಲ್ಲಿಕಾ ಬೇಗಂ ರಹಮಾನ್ಸಾ ಅಬ್ದುಲ್ ರಹಮಾನ್ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಎಂ. ಕೃಷ್ಣನ್ ಆಕೆಯನ್ನು ಒದ್ದಿದ್ದರಿಂದ 2019ರ ಜನವರಿ 17ರಂದು ಆಕೆ ಮೃತಪಟ್ಟಿದ್ದಳು. ಕಳೆದ ವಾರ ನ್ಯಾಯಾಲಯದಲ್ಲಿ ಕೃಷ್ಣನ್ (40) ತಪ್ಪೊಪ್ಪಿಕೊಂಡಿದ್ದ ಎಂದು "ಟುಡೇ" ಪತ್ರಿಕೆ ವರದಿ ಮಾಡಿದೆ.
ಕೃಷ್ಣನ್ ಸೆರವಾಸ ಅವಧಿ ಆತನ ಬಂಧನದ ದಿನದಿಂದ ಪೂರ್ವಾನ್ವಯವಾಗುತ್ತದೆ. 2018ರಲ್ಲಿ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ ಆರೋಪದಲ್ಲಿ ಕೃಷ್ಣನ್ ತನ್ನನ್ನು ತಿದ್ದಿಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಪತ್ನಿ ಹಾಗೂ ಪ್ರೇಯಸಿಗೆ ಕಿರುಕುಳ ನೀಡುತ್ತಿದ್ದ ಎಂದು ನ್ಯಾಯಮೂರ್ತಿ ವೆಲೇರಿ ಥಿಯಾನ್ ಹೇಳಿದ್ದಾರೆ.
ಕೃಷ್ಣನ್ ಮಾನಸಿಕ ಕಾಯಿಲೆ ಹಾಗೂ ಆಲ್ಕೋಹಾಲ್ ಕೂಡಾ ಆತನ ಕೃತ್ಯದ ಮೇಲೆ ಪ್ರಭಾವ ಬೀರಿತ್ತು ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ವಿವರಿಸಿದ್ದಾರೆ. 2015ರಲ್ಲಿ ಕೃಷ್ಣನ್ ಹಾಗೂ ಆತನ ಪ್ರೇಯಸಿ ತಮ್ಮ ಮಾಸ್ಟರ್ ಬೆಡ್ ರೂಂ ನಲ್ಲಿ ಜತೆಗೆ ಮದ್ಯ ಸೇವಿಸುತ್ತಿದ್ದಾಗ ಪತ್ನಿಯ ಕೈಗೆ ಸಿಕ್ಕಿಹಾಕಿಕೊಂಡಿದ್ದರು.