ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಮೃತ್ಯು: ವರ್ಷದಲ್ಲಿ 9ನೇ ಪ್ರಕರಣ
ನ್ಯೂಯಾರ್ಕ್: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವಿನ ಸರಣಿ ಮುಂದುವರಿದಿದ್ದು, ಬೋಸ್ಟನ್ನಲ್ಲಿ 20 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಆದರೆ ಈ ಸಾವಿನ ಹಿಂದೆ ಯಾವುದೇ ಸಂಶಯಗಳು ಇಲ್ಲ ಎಂದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಬೋಸ್ಟನ್ ನಲ್ಲಿದ್ದ ಭಾರತೀಯ ವಿದ್ಯಾರ್ಥಿ ಶ್ರೀ ಅಭಿಜಿತ್ ಪರುಚುರು ಅವರ ಅಕಾಲಿಕ ಮರಣದಿಂದ ತೀವ್ರ ಬೇಸರವಾಗಿದೆ" ಎಂದು ನ್ಯೂಯಾರ್ಕ್ ನ ಭಾರತೀಯ ಕಾನ್ಸುಲೇಟ್ ಜನರಲ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಅಭಿಜಿತ್ ಪೋಷಕರು ಕನೆಕ್ಟಿಕಟ್ ನಲ್ಲಿದ್ದು, ತನಿಖಾಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಆರಂಭಿಕ ತನಿಖೆಯಂತೆ ಸಾವಿನ ಹಿಂದೆ ಯಾವುದೇ ಸಂದೇಹ ಇಲ್ಲ ಎಂದು ಕಾನ್ಸುಲೇಟ್ ಸ್ಪಷ್ಟಪಡಿಸಿದೆ.
ಈ ಸಂಬಂಧ ಎಲ್ಲ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಮೃತದೇಹವನ್ನು ಭಾರತಕ್ಕೆ ಸಾಗಿಸಲು ಅಗತ್ಯವಾದ ಎಲ್ಲ ನೆರವನ್ನು ನೀಡಲಾಗಿದೆ. ಜತೆಗೆ ಸ್ಥಳೀಯ ಅಧಿಕಾರಿಗಳು ಮತ್ತು ಭಾರತೀಯ- ಅಮೆರಿಕನ್ ಸಮುದಾಯದ ಜತೆಗೂ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಅಭಿಜಿತ್ ಅವರ ಅಂತ್ಯಸಂಸ್ಕಾರವನ್ನು ಅವರ ಹುಟ್ಟೂರು ಆಂಧ್ರಪ್ರದೇಶದ ತೆನಾಲಿಯಲ್ಲಿ ನಡೆಸಲಾಗಿದೆ. ಭಾರತಕ್ಕೆ ಶವ ಸಾಗಿಸಲು ಅಮೆರಿಕದ ಲಾಭರಹಿತ ಸಂಸ್ಥೆಯಾದ ಟೀಮ್ ನೆರವಾಗಿದೆ ಎಂದು ಮೂಲಗಳು ಹೇಳಿವೆ.
2024ರ ಆರಂಭದಿಂದ ಇದುವರೆಗೆ ಕನಿಷ್ಠ ಆರಕ್ಕೂ ಹೆಚ್ಚು ಮಂದಿ ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಈ ಆತಂಕಕಾರಿ ಬೆಳವಣಿಗೆ ಭಾರತೀಯ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ ನಲ್ಲಿ 34 ವರ್ಷದ ಶಾಸ್ತ್ರೀಯ ನೃತ್ಯಗಾರ ಅಮರನಾಥ್ ಘೋಷ್ ಎಂಬುವವರನ್ನು ಸೈಂಟ್ ಲೂಯಿಸ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಫೆಬ್ರವರಿ 5ರಂದು ಸಮೀರ್ ಕಾಮತ್ (23) ಎಂಬವರು ಹತ್ಯೆಯಾಗಿದ್ದರು. ಫೆಬ್ರವರಿ 2ರಂದು ವಿವೇಕ್ ತನೇಜಾ (41) ಎಂಬುವವರ ಮೇಲೆ ಮಾರಕ ಹಲ್ಲೆ ನಡೆದಿತ್ತು. ಇದಕ್ಕೂ ಮುನ್ನ ಸೈಯ್ಯದ್ ಮಝಾಹಿತರ್ ಅಲಿ ಎಂಬವರ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದರು. ಮಾದಕ ವ್ಯಸನಿಯೊಬ್ಬ ಜಾರ್ಜಿಯಾದಲ್ಲಿ ವಿವೇಕ್ ಸೈನಿ ಎಂಬ 25 ವರ್ಷದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದ.