ಇಂಡೋನೇಶ್ಯಾ: ಜ್ವಾಲಾಮುಖಿ ಸ್ಫೋಟ, ಸಾವಿರಾರು ಜನರ ಸ್ಥಳಾಂತರ

Update: 2024-01-22 15:44 GMT

Photo:NDTV

ಜಕಾರ್ತ: ಇಂಡೋನೇಶ್ಯಾದ ಮೆರಪಿ ಪರ್ವತ ಸೋಮವಾರ ಲಾವಾ(ಶಿಲಾದ್ರವ)ವನ್ನು ಹೊರ ಉಗುಳಿದೆ. ಜತೆಗೆ ದೇಶದಾದ್ಯಂತದ ಹಲವು ಪರ್ವತಗಳಲ್ಲೂ ಜ್ವಾಲಾಮುಖಿ ಸ್ಫೋಟಿಸಿದ ಹಿನ್ನೆಲೆಯಲ್ಲಿ ಪರ್ವತ ಪ್ರದೇಶಗಳ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಜನಸಾಂದ್ರತೆಯ ಜಾವಾ ದ್ಬೀಪದಲ್ಲಿ ಮೆರಾಪಿ ಪರ್ವತದಿಂದ ಬಿಸಿ ಬೂದಿಯ ಮೋಡ ಹಾಗೂ ಕಲ್ಲು ಮಣ್ಣಿನ ಮಿಶ್ರಣ ಇಳಿಜಾರಿನಲ್ಲಿ ಸುಮಾರು 2 ಕಿ.ಮೀ ದೂರದವರೆಗೆ ಹರಿದು ಬಂದಿದೆ. ಬಿಸಿ ಗಾಳಿಯ ಮೋಡ ಪರ್ವತದಿಂದ ಸುಮಾರು 100 ಮೀಟರ್‍ಗಳಷ್ಟು ಎತ್ತರಕ್ಕೆ ಚಿಮ್ಮಿ ಸ್ಫೋಟಗೊಂಡ ಕಾರಣ ಸುತ್ತಮುತ್ತಲಿನ ಹಲವು ಗ್ರಾಮಗಳು ಬೂದಿಯಿಂದ ಮುಚ್ಚಿಹೋದವು ಎಂದು ಇಂಡೋನೇಶ್ಯಾದ ಭೂವೈಜ್ಞಾನಿಕ ಮತ್ತು ವಿಪತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಆಗುಸ್‍ಬುದಿ ಸ್ಯಾಂಟೊಸೊ ಹೇಳಿದ್ದಾರೆ.

ಯೋಗ್ಯಕರ್ತ ನಗರದ ಸುಮಾರು 30 ಕಿ.ಮೀ ದೂರದಲ್ಲಿರುವ ಮೆರಾಪಿ ಪರ್ವತ 9,737 ಅಡಿ ಎತ್ತರವಿದ್ದು ದೇಶದಲ್ಲಿರುವ 120ಕ್ಕೂ ಅಧಿಕ ಜ್ವಾಲಾಮುಖಿ ಪರ್ವತಗಳಲ್ಲಿ ಅತ್ಯಂತ ಸಕ್ರಿಯ ಜ್ವಾಲಾಮುಖಿ ಪರ್ವತವಾಗಿದೆ. ಈ ಪರ್ವತದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 2,50,000 ಜನರು ವಾಸಿಸುತ್ತಿದ್ದಾರೆ. ಪರ್ವತದ ಇಳಿಜಾರು ಪ್ರದೇಶದ ನಿವಾಸಿಗಳು ಜ್ವಾಲಾಮುಖಿ ಕೇಂದ್ರದಿಂದ 7 ಕಿ.ಮೀ.ಗಳಷ್ಟು ಅಂತರ ಕಾಯ್ದುಕೊಳ್ಳುವಂತೆ ಮತ್ತು ಕೆಳಗೆ ಹರಿದು ಬರುತ್ತಿರುವ ಲಾವಾದ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ರವಿವಾರ ಪೂರ್ವದ ನುಸ ತೆಂಗಾರ ಪ್ರಾಂತದಲ್ಲಿ ಲೆವೋಟ್ಬಿ ಲಕಿ ಪರ್ವತದಿಂದ 2,300 ಅಡಿಗಳಷ್ಟು ಬಿಸಿ ಗಾಳಿ ಮತ್ತು ಬೂದಿ ಹಾರಿದ್ದು ಆತಂಕಗೊಂಡ 6,500ಕ್ಕೂ ಅಧಿಕ ಮಂದಿ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News