ಇಂಡೋನೇಶ್ಯಾದಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ: ಸುನಾಮಿ ಎಚ್ಚರಿಕೆ, ವಿಮಾನ ನಿಲ್ದಾಣ ಬಂದ್
ಜಕಾರ್ತ: ಇಂಡೋನೇಶ್ಯಾದ ರುವಾಂಗ್ ಪರ್ವತದಲ್ಲಿ ಗುರುವಾರ 5 ಬಾರಿ ಜ್ವಾಲಾಮುಖಿ ಸ್ಫೋಟಿಸಿದ್ದು ಸಮೀಪದ ವಿಮಾನ ನಿಲ್ದಾಣವನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಪರ್ವತವು ಉಗುಳಿದ ಬಿಸಿಬೂದಿ ಮತ್ತು ಮಣ್ಣಿನ ರಾಶಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಶಿಬೀಳುವ ಸಾಧ್ಯತೆ ಇರುವುದರಿಂದ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಉತ್ತರ ಸುಲಾವೆಸಿ ಪ್ರಾಂತದಲ್ಲಿನ ರುವಾಂಗ್ ದ್ವೀಪದಲ್ಲಿರುವ ರುವಾಂಗ್ ಪರ್ವತದಲ್ಲಿ ಬುಧವಾರ 4 ಜ್ವಾಲಾಮುಖಿ ಸ್ಫೋಟಗೊಂಡಿದ್ದು ಲಾವಾ ಮತ್ತು ಬಿಸಿ ಬೂದಿಯ ಮೋಡ ಆಕಾಶದೆತ್ತರಕ್ಕೆ ವ್ಯಾಪಿಸಿತ್ತು. ಗುರುವಾರ ಬೆಳಿಗ್ಗೆ ಜ್ವಾಲಾಮುಖಿಯ ರುದ್ರನರ್ತನ ಮುಂದುವರಿದಿದ್ದು ಮನಾಡೋ ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸಮೀಪದ ತಗುಲಾಂಡಂಗ್ ದ್ವೀಪದ ಹಲವು ಮನೆಗಳಿಗೆ ಹಾನಿಯಾಗಿದ್ದು ರಸ್ತೆಗಳಲ್ಲಿ ಜ್ವಾಲಾಮುಖಿಯ ಅವಶೇಷಗಳು ಹರಡಿಬಿದ್ದಿದ್ದು ಸಂಚಾರಕ್ಕೆ ತೊಡಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರದೇಶದ ಸುಮಾರು 11,000 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜನರಿಗೆ ಸುರಕ್ಷಿತ ರೀತಿಯಲ್ಲಿ ಸ್ಥಳಾಂತರಗೊಳ್ಳುವುದಕ್ಕೆ ನೆರವಾಗಲು 20 ಸದಸ್ಯರ ತಂಡವನ್ನು ರಚಿಸಲಾಗಿದೆ. ತಗುಲಾಂಡಂಗ್ ದ್ವೀಪದ ಜೈಲಿನಲ್ಲಿದ್ದ 17 ಕೈದಿಗಳು, 11 ಅಧಿಕಾರಿಗಳು ಹಾಗೂ 19 ಸ್ಥಳೀಯರನ್ನು ದೋಣಿಗಳ ಮೂಲಕ ಲಿಕುಪಾಂಗ್ ಬಂದರಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ತಗುಲಾಂಡಂಗ್ ದ್ವೀಪ ನಿವಾಸಿಗಳು, ವಿಶೇಷವಾಗಿ ಕಡಲತೀರದ ಬಳಿ ವಾಸಿಸುವವರು ಜ್ವಾಲಾಮುಖಿಯ ಅವಶೇಷಗಳು ಸಮುದ್ರಕ್ಕೆ ಕುಸಿಯುವುದರಿಂದ, ಬಿಸಿ ಬೂದಿಯ ವಿಸರ್ಜನೆಯಿಂದ ಸಮುದ್ರದಲ್ಲಿ ಅಲೆಗಳ ಉಬ್ಬರ ಮತ್ತು ಸುನಾಮಿ ಸಂಭವಿಸುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.