ಇನ್ನು 24 ಗಂಟೆಯೊಳಗೆ ಇಸ್ರೇಲ್ ಮೇಲೆ ಇರಾನ್ ದಾಳಿ ಸಾಧ್ಯತೆ; ಮಿತ್ರ ರಾಷ್ಟ್ರದ ನೆರವಿಗೆ ಯುದ್ಧನೌಕೆಯನ್ನು ರವಾನಿಸಿದ ಅಮೆರಿಕ
ಹೊಸದಿಲ್ಲಿ: ಡಮಾಸ್ಕಸ್ ನಲ್ಲಿನ ದೂತಾವಾಸದಲ್ಲಿ ಕಳೆದ ವಾರ ಇರಾನ್ ನ ಹಿರಿಯ ಸೇನಾಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಇರಾನ್ ದಾಳಿಯನ್ನು ಇಸ್ರೇಲ್ ಎದುರು ನೋಡುತ್ತಿದೆ. ರವಿವಾರದೊಳಗೆ ಪ್ರತೀಕಾರದ ದಾಳಿ ನಡೆಯಬಹುದು ಎಂದು ಅಮೆರಿಕ ಹಾಗೂ ಗುಪ್ತಚರ ಮೂಲಗಳು ಮುನ್ನೆಚ್ಚರಿಕೆ ನೀಡಿವೆ. ಈ ದಾಳಿಯು ಪೂರ್ಣಪ್ರಮಾಣದ ಪ್ರಾಂತೀಯ ಯುದ್ಧಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇರಾನ್ ನಿಂದ ಶೀಘ್ರವೇ ದಾಳಿ ನಡೆಯಬಹುದು ಎಂದು ಇಸ್ರೇಲ್ ಅನ್ನು ಎಚ್ಚರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಹಾಗೆ ಮಾಡದಂತೆ ಇರಾನ್ ಗೂ ಎಚ್ಚರಿಸಿದ್ದಾರೆ.
ಕಾರ್ಯಕ್ರಮವೊಂದರ ನಂತರ ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಜೋ ಬೈಡನ್, “ ನನ್ನ ನಿರೀಕ್ಷೆಯ ಪ್ರಕಾರ ತಡವಲ್ಲದಿದ್ದರೂ, ಶೀಘ್ರದಲ್ಲೇ ದಾಳಿ ನಡೆಯುವ ಸಾಧ್ಯತೆ ಇದೆ” ಎಂದು ಹೇಳಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ಹಾಗೂ ಬ್ಲೂಮ್ ಬರ್ಗ್ ವರದಿಗಳ ಪ್ರಕಾರ, ಯಹೂದಿಗಳ ದೇಶವಾದ ಇಸ್ರೇಲ್ ಹಾಗೂ ಅದರ ಮಿತ್ರ ದೇಶಗಳ ಮೇಲೆ ಇರಾನ್ ನೆಲದಿಂದ ದಾಳಿ ನಡೆಯುವ ಸಾಧ್ಯತೆಯು ಪ್ರಮುಖ ಸನ್ನಿವೇಶವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಡ್ರೋನ್ ಗಳು ಹಾಗೂ ನಿಖರ ಕ್ಷಿಪಣಿಗಳ ಮೂಲಕ ಮುಂದಿನ 24 ಗಂಟೆಗಳೊಳಗೆ ಇಸ್ರೇಲ್ ಮೇಲೆ ಬಾಂಬ್ ದಾಳಿ ನಡೆಯಬಹುದು ಎಂದು ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ಈ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಈ ಮಾಹಿತಿಗಳನ್ನು ಆಧರಿಸಿ ಅಮೆರಿಕಾವು ಈ ಪ್ರಾಂತ್ಯದಲ್ಲಿರುವ ಇಸ್ರೇಲ್ ಹಾಗೂ ಅಮೆರಿಕಾ ಪಡೆಗಳನ್ನು ರಕ್ಷಿಸಲು ಹೆಚ್ಚುವರಿ ಸೇನಾ ಸಾಮಗ್ರಿಗಳನ್ನು ರವಾನಿಸಿದೆ. ಪೂರ್ವ ಮೆಡಟರೇನಿಯನ್ ಸಮುದ್ರಕ್ಕೆ ಎರಡು ಯುದ್ಧ ನೌಕೆಗಳನ್ನು ಅಮೆರಿಕಾ ರವಾನಿಸಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪೈಕಿ ಕೆಂಪು ಸಮುದ್ರದಲ್ಲಿ ಇತ್ತೀಚೆಗೆ ಹೌದಿಗಳ ಡ್ರೋನ್ ಗಳು ಹಾಗೂ ಯುದ್ಧ ನೌಕೆ ನಿರೋಧಕ ಕ್ಷಿಪಣಿಗಳ ವಿರುದ್ಧ ವಾಯು ರಕ್ಷಣಾ ಕಾರ್ಯಾಚರಣೆ ನಡೆಸಿದ್ದ ಯುಎಸ್ಎುಸ್ ಕಾರ್ನಿ ಯುದ್ಧ ನೌಕೆಯೂ ಸೇರಿದೆ.