ಕ್ಷಿಪಣಿ ದಾಳಿಗೆ ಇಸ್ರೇಲ್ ನಿಂದ ಪ್ರತಿಕಾರದ ಪ್ರತಿಜ್ಞೆ: ʼಅಪಾರ ವಿನಾಶʼ ಎದುರಿಸಬೇಕಾಗುತ್ತದೆ ಎಂದ ಇರಾನ್
ಟೆಹ್ರಾನ್: ಇಸ್ರೇಲ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಕ್ಷಿಪಣಿ ದಾಳಿಗಳಿಗೆ ಪ್ರತಿಕಾರ ನೀಡುವುದಾಗಿ ಹೇಳಿದ ಬೆಂಜಮಿನ್ ನೆತನ್ಯಾಹುಗೆ ಇರಾನ್ ನ ರೆವಲ್ಯೂಷನರಿ ಗಾರ್ಡ್ ಬುಧವಾರ ʼʼಅಪಾರ ವಿನಾಶವನ್ನು ಎದುರಿಸಬೇಕಾಗುತ್ತದೆʼ ಎಂದು ಕಠಿಣ ಎಚ್ಚರಿಕೆಯನ್ನು ನೀಡಿದೆ. ಇದರಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿಸಿದೆ.
ಟೆಲ್ ಅವೀವ್ ಬಳಿ ಮೂರು ಇಸ್ರೇಲ್ ಸೇನಾ ನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿದ್ದೇವೆ. 90% ತಮ್ಮ ಉದ್ದೇಶಿತ ಗುರಿಯನ್ನು ನಾವು ತಲುಪಿದ್ದೇವೆ ಎಂದು ಇರಾನ್ ನ ರೆವಲ್ಯೂಷನರಿ ಗಾರ್ಡ್ ತಿಳಿಸಿದೆ.
ಆದರೆ ಇಸ್ರೇಲ್ ಈವರೆಗೆ ಯಾವುದೇ ಸಾವು-ನೋವುಗಳ ಬಗ್ಗೆ ದೃಢಪಡಿಸಿಲ್ಲ. ʼಇರಾನ್ ಇಂದು ರಾತ್ರಿ ದೊಡ್ಡ ತಪ್ಪು ಮಾಡಿದೆ ಮತ್ತು ಇದಕ್ಕೆ ಇರಾನ್ ಸರಿಯಾದ ಬೆಲೆ ತೆರಬೇಕಾಗುತ್ತದೆʼ ಎಂದು ನೆತನ್ಯಾಹು ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರವನ್ನು ನೀಡಿದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ʼಇರಾನ್ ಯುದ್ಧದಾಹಿ ರಾಷ್ಟ್ರವಲ್ಲ, ಆದರೆ ಅದು ಯಾವುದೇ ಬೆದರಿಕೆಗಳನ್ನು ದೃಢವಾಗಿ ವಿರೋಧಿಸುತ್ತದೆʼ ಎಂದು ಇಸ್ರೇಲ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರುಲ್ಲಾ ಅವರನ್ನು ಹತ್ಯೆ ಮಾಡಿತ್ತು. ಇದಕ್ಕೆ ತಕ್ಕ ಪ್ರತಿಕಾರ ನೀಡುವುದಾಗಿ ಇರಾನ್ ಹೇಳಿಕೊಂಡಿತ್ತು. ನಿನ್ನೆ 100ಕ್ಕೂ ಹೆಚ್ಚು ಕ್ಷಿಪಣಿಗಳ ಮೂಲಕ ಇಸ್ರೇಲ್ ಭೂಪ್ರದೇಶದ ಮೇಲೆ ಇರಾನ್ ದಾಳಿ ನಡೆಸಿತ್ತು.