ಗಾಝಾದಲ್ಲಿ ಮಸೀದಿ, ಶಾಲೆಯ ಮೇಲೆ ಇಸ್ರೇಲ್ ದಾಳಿ; ಕನಿಷ್ಠ 24 ಮಂದಿ ಮೃತ್ಯು
ಗಾಝಾ : ಗಾಝಾ ಪಟ್ಟಿಯಲ್ಲಿ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದ ಮಸೀದಿ ಹಾಗೂ ಶಾಲೆಯ ಮೇಲೆ ರವಿವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು ಇತರ 93 ಮಂದಿ ಗಾಯಗೊಂಡಿರುವುದಾಗಿ ಗಾಝಾ ಸರಕಾರದ ಮೂಲಗಳು ಹೇಳಿವೆ.
ಗಾಝಾ ಪಟ್ಟಿಯ ಅಲ್-ಅಖ್ಸಾ ಆಸ್ಪತ್ರೆಯ ಬಳಿಯಿರುವ ದೇರ್ ಅಲ್-ಬಲಾಹ್‍ನಲ್ಲಿರುವ ಮಸೀದಿ ಹಾಗೂ ಶಾಲೆಯ ಮೇಲೆ ದಾಳಿ ನಡೆದಿದೆ. ಅಲ್-ಅಖ್ಸಾ ಆಸ್ಪತ್ರೆಯ ಬಳಿಯಿರುವ ಇಬ್ನ್ ರಶ್ದ್ ಶಾಲೆ ಮತ್ತು ಶುಹಾದಾ ಅಲ್-ಅಖ್ಸಾ ಮಸೀದಿಯ ಒಳಗೆ ಕಾರ್ಯಾಚರಿಸುತ್ತಿದ್ದ ಹಮಾಸ್‍ನ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.
ಸ್ಥಳಾಂತರಗೊಂಡ ಜನರಿಗೆ ಮಸೀದಿಯಲ್ಲಿ ಆಶ್ರಯ ಒದಗಿಸಲಾಗಿದ್ದು ಮೃತರ ಸಂಖ್ಯೆ ಹೆಚ್ಚಬಹುದು ಎಂದು ಗಾಝಾದ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಈ ಮಧ್ಯೆ, ಶನಿವಾರ ರಾತ್ರಿಯಿಂದ ಉತ್ತರ ಗಾಝಾದಲ್ಲಿ ಇಸ್ರೇಲ್ ಪಡೆ ಟ್ಯಾಂಕ್‍ಗಳ ಮೂಲಕ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.