ಆಕ್ರಮಣ ಸನ್ನಿಹಿತವಾಗಿದೆ, ತಕ್ಷಣ ಹೊರಡಿ ; ರಫಾ ನಿವಾಸಿಗಳಿಗೆ ಇಸ್ರೇಲ್ ಸೇನೆ ಸೂಚನೆ
ಗಾಝಾ: ಪೂರ್ವ ರಫಾದಿಂದ ತಕ್ಷಣ ಹೊರಡುವಂತೆ ನಾಗರಿಕರಿಗೆ ಇಸ್ರೇಲ್ ಸೇನೆ ಸೋಮವಾರ ಸಲಹೆ ನೀಡಿದ್ದು ಇದು ರಫಾದಲ್ಲಿ ಭೂದಾಳಿ ಸನ್ನಿಹಿತವಾಗಿರುವ ಸೂಚನೆಯಾಗಿದೆ ಎಂದು ವರದಿಯಾಗಿದೆ.
ಖಾನ್‍ಯೂನಿಸ್ ನಗರದ ಬಳಿ, ಇಸ್ರೇಲ್ ಘೋಷಿಸಿರುವ ಮಾನವೀಯ ಕಾರಿಡಾರ್ `ಮುವಾಸಿ' ನಗರಕ್ಕೆ ತೆರಳುವಂತೆ ಫೆಲೆಸ್ತೀನೀಯರಿಗೆ ಇಸ್ರೇಲ್ ಸೇನೆ ಸೂಚಿಸಿದೆ. ಈ ಪ್ರದೇಶದಲ್ಲಿ ಮೊಬೈಲ್ ಆಸ್ಪತ್ರೆ, ಟೆಂಟ್‍ಗಳು, ಆಹಾರ ಮತ್ತು ನೀರು ಸೇರಿದಂತೆ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಮೂಲಗಳನ್ನು ಉಲ್ಲೇಖಿಸಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. `ಮಾನವೀಯ ಕಾರಿಡಾರ್ ಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವಂತೆ ಹೆಲಿಕಾಪ್ಟರ್ ಗಳ ಮೂಲಕ, ಎಸ್‍ಎಂಎಸ್ ಸಂದೇಶಗಳು, ಫೋನ್ ಕರೆಗಳು ಹಾಗೂ ಅರೆಬಿಕ್‍ನಲ್ಲಿ ಮಾಧ್ಯಮ ಪ್ರಸಾರಗಳ ಮೂಲಕ ತಿಳಿಸಲಾಗಿದೆ. ಹಮಾಸ್‍ನ ಒತ್ತೆಸೆರೆಯಲ್ಲಿ ಇರುವವರು ಬಿಡುಗಡೆಗೊಳ್ಳುವವರೆಗೆ ಗಾಝಾದಲ್ಲಿ ಎಲ್ಲೆಡೆ ಹಮಾಸ್‍ಗಳನ್ನು ಬೆನ್ನಟ್ಟಲಾಗುವುದು' ಎಂದು ಐಡಿಎಫ್ ಘೋಷಿಸಿದೆ.
ಇಸ್ರೇಲ್ ಸೀಮಿತ ರೂಪದ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ ಎಂದು ಸೇನೆಯ ವಕ್ತಾರ ಲೆ|ಕ| ನಡಾವ್ ಶೊಷಾನಿ ಹೇಳಿದ್ದಾರೆ. ಇಸ್ರೇಲ್ ಮುಂದಿರಿಸಿದ ಕದನ ವಿರಾಮ ಪ್ರಸ್ತಾವನೆಯನ್ನು ಹಮಾಸ್ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ರಫಾದಲ್ಲಿ ಶೀಘ್ರವೇ ಪ್ರಬಲ ಕಾರ್ಯಾಚರಣೆ ಸನ್ನಿಹಿತವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ರವಿವಾರ ಎಚ್ಚರಿಕೆ ನೀಡಿದ್ದರು.
ಅಕ್ಟೋಬರ್ 7ರಂದು ಗಾಝಾ ಯುದ್ಧ ಆರಂಭಗೊಂಡ ಬಳಿಕ 1.4 ದಶಲಕ್ಷಕ್ಕೂ ಅಧಿಕ ಫೆಲಸ್ತೀನೀಯರು(ಗಾಝಾದ ಜನಸಂಖ್ಯೆಯ 50%ಕ್ಕೂ ಅಧಿಕ) ರಫಾ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ. ಗಾಝಾದಲ್ಲಿ ಕದನವಿರಾಮ ಒಪ್ಪಂದ ಜಾರಿಗೆ ಈಜಿಪ್ಟ್‍ನ ಕೈರೋದಲ್ಲಿ ಈಜಿಪ್ಟ್, ಖತರ್ ಮತ್ತು ಅಮೆರಿಕ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆ ನಡೆಯುತ್ತಿದೆ. ಈ ಸಂದರ್ಭ ಇಸ್ರೇಲ್ ಮುಂದಿರಿಸಿದ ಪ್ರಸ್ತಾವನೆಯನ್ನು ಹಮಾಸ್ ವಿರೋಧಿಸಿರುವುದರಿಂದ ಗಾಝಾದಲ್ಲಿ ಭೂದಾಳಿ ನಡೆಸುವ ಯೋಜನೆ ಕಾರ್ಯಗತಗೊಳಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.