ಇಸ್ರೇಲ್ ನಾಯಕರ ಬಂಧನ ವಾರಂಟ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧಾರ
ಹೇಗ್ : ಇಸ್ರೇಲಿ ನಾಯಕರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಲು ಐಸಿಸಿಗೆ ಅಧಿಕಾರವಿಲ್ಲ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಗುರುವಾರ ಪ್ರತಿಪಾದಿಸಿದ್ದಾರೆ.
ಝೆಕೋಸ್ಲಾವಾಕಿಯಾದ ವಿದೇಶಾಂಗ ಸಚಿವ ಜಾನ್ ಲಿಪಾವ್ಸ್ಕಿ ಜತೆಗೆ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು `ಐಸಿಸಿಯ ನಿರ್ಧಾರವು ಅಪಾಯಕಾರಿ ಪೂರ್ವ ನಿದರ್ಶನಕ್ಕೆ ಕಾರಣವಾಗಲಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಹೊರಡಿಸಲಾದ ಬಂಧನ ವಾರಂಟ್ಗಳನ್ನು ಪ್ರಶ್ನಿಸುವ ನಿರ್ಧಾರದ ಬಗ್ಗೆ ಹೇಗ್ನಲ್ಲಿರುವ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ಗೆ ಸೂಚಿಸಲಾಗಿದೆ. ಜತೆಗೆ ಬಂಧನ ವಾರಂಟ್ನ ಅನುಷ್ಠಾನವನ್ನು ವಿಳಂಬಗೊಳಿಸಬೇಕೆಂಬ ಬೇಡಿಕೆ ಸಲ್ಲಿಸಲಾಗಿದೆ' ಎಂದು ಹೇಳಿದ್ದಾರೆ.
ಗಾಝಾದಲ್ಲಿ ಹಮಾಸ್ ನ ವಶದಲ್ಲಿರುವ ತನ್ನ ಒತ್ತೆಯಾಳುಗಳನ್ನು ವಾಪಾಸು ಕರೆತರುವ ತನ್ನ ಉದ್ದೇಶಗಳನ್ನು ಸಾಧಿಸಿದ ಬಳಿಕ ಇಸ್ರೇಲ್ ಗಾಝಾದಲ್ಲಿನ ಯುದ್ಧವನ್ನು ಪೂರ್ಣಗೊಳಿಸುತ್ತದೆ ಮತ್ತು ಹಮಾಸ್ ಹೋರಾಟಗಾರರು ಗಾಝಾ ಪಟ್ಟಿಯ ಮೇಲೆ ಇನ್ನು ನಿಯಂತ್ರಣ ಹೊಂದಿರುವುದಿಲ್ಲ. ಶಾಂತಿ ಅನಿವಾರ್ಯ ಆದರೆ ಅದು ಭ್ರಮೆಗಳನ್ನು ಆಧರಿಸಲು ಸಾಧ್ಯವಿಲ್ಲ. ಗಾಝಾದಲ್ಲಿ ನಾಗರಿಕರ ಬದುಕಿನ ಮೇಲೆ ನಿಯಂತ್ರಣ ಹೊಂದಿರಲು ಇಸ್ರೇಲ್ ಬಯಸಿಲ್ಲ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ರ ಬಂಧನಕ್ಕೆ ಕಳೆದ ಗುರುವಾರ ಐಸಿಸಿ ವಾರಂಟ್ ಜಾರಿಗೊಳಿಸಿದೆ.