ಸೆರೆಹಿಡಿದ ಸೈನಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ರಶ್ಯ: ಉಕ್ರೇನ್ ಆರೋಪ
ಕೀವ್ : ಪೂರ್ವ ಝಪೋರಿಜಿಯಾ ವಲಯದಲ್ಲಿ ಶರಣಾದ ಐವರು ಉಕ್ರೇನ್ ಸೈನಿಕರನ್ನು ರಶ್ಯದ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ಉಕ್ರೇನ್ ಗುರುವಾರ ಆರೋಪಿಸಿದೆ.
ಝಪೋರಿಜಿಯಾ ಪ್ರಾಂತದ ಪೊಲೊಗಿವ್ ಜಿಲ್ಲೆಯ ನೊವೊಡರಿವ್ಕ ಗ್ರಾಮದ ಬಳಿ ನವೆಂಬರ್ 24ರಂದು ಘಟನೆ ನಡೆದಿದೆ. ವಶಕ್ಕೆ ಪಡೆದ ಉಕ್ರೇನ್ ನ 6 ಯೋಧರಲ್ಲಿ ಐವರನ್ನು ರಶ್ಯ ಸಶಸ್ತ್ರ ಪಡೆಗಳ ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ. ಈ ಆರೋಪದ ಬಗ್ಗೆ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ರೆಡ್ಕ್ರಾಸ್ ಸಮಿತಿಯನ್ನು ಭೇಟಿ ಮಾಡಿ ಮಾಹಿತಿ ನೀಡಿರುವುದಾಗಿ ಉಕ್ರೇನ್ ನ ಮಾನವ ಹಕ್ಕುಗಳ ಅಧಿಕಾರಿ ಡಿಮಿಟ್ರೊ ಲ್ಯುಬಿನೆಟ್ಸ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ರಶ್ಯದ ಪಡೆಗಳು ಐವರು ಯುದ್ಧಕೈದಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಉಕ್ರೇನ್ ಪ್ರತಿಪಾದಿಸಿದೆ.
ರಶ್ಯ ಮತ್ತು ಉಕ್ರೇನ್ ನ ಯುದ್ಧಕೈದಿಗಳ ಸಾಮೂಹಿಕ ಮರಣದಂಡನೆ ಸೇರಿದಂತೆ ಯುದ್ಧಕೈದಿಗಳ ವಿರುದ್ಧ ಅಂತರಾಷ್ಟೀಯ ಮಾನವೀಯ ಕಾನೂನಿನ ಉಲ್ಲಂಘನೆಯ ಹಲವು ಪ್ರಕರಣಗಳ ದಾಖಲೆಯನ್ನು ವಿಶ್ವಸಂಸ್ಥೆ ಸಂಗ್ರಹಿಸಿರುವುದಾಗಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಏಜೆನ್ಸಿಯ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.